ದಾವಣಗೆರೆ: ಪಟಾಕಿ ಕಿಡಿ ತಗುಲಿ ಧಗ ಧಗ ಉರಿದ ಮೆಡಿಕಲ್ ಗೋದಾಮು...!
ದಾವಣಗೆರೆ, ಅಕ್ಟೋಬರ್ 25: ಪಟಾಕಿಯ ಕಿಡಿಯ ತಗುಲಿ ಮೆಡಿಕಲ್ ಏಜೆನ್ಸಿಯ ಗೋದಾಮು ಹೊತ್ತಿ ಉರಿದ ಘಟನೆ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಮೈಸೂರು ಬಯೋಲಾಜಿಕಲ್ ಏಜೆನ್ಸಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೀಪಾವಳಿ ಹಬ್ಬದ ಪ್ರಯುಕ್ತ ಪೂಜೆ ಮಾಡಿ ಬಳಿಕ ಪಟಾಕಿ ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯ ಬೆಂಕಿ ಕಿಡಿಯು ತಗುಲಿದ ಪರಿಣಾಮ ಮೆಡಿಕಲ್ ಗೋದಾಮು ಹೊತ್ತಿ ಉರಿಯಲಾರಂಭಿಸಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಅಶೋಕ್ ಕುಮಾರ್ ಹಾಗೂ ಚಿದಂಬರ ದೀಕ್ಷಿತ್ ಎಂಬುವವರ ಮಾಲೀಕತ್ವದ ಈ ಏಜೆನ್ಸಿಯಲ್ಲಿ ರಾತ್ರಿ 7.30ರ ಹೊತ್ತಿಗೆ ಪೂಜೆ ಪುನಸ್ಕಾರ ನೆರವೇರಿತು. ಬಳಿಕ ಅದೇ ರಸ್ತೆಯಲ್ಲಿ ಸಂಸ್ಥೆಯ ಸಿಬ್ಬಂದಿ ಪಟಾಕಿ ಸಿಡಿಸಲು ಶುರುಮಾಡಿದರು. ಎಲ್ಲರೂ ಖುಷಿಯ ಸಂಭ್ರಮದಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಸುಟ್ಟ ವಾಸನೆ ಬರಲಾರಂಭಿಸಿತು. ಆಗ ಹೊಗೆಯಾಡುತ್ತಿರುವುದು ಕಂಡು ಬಂತು. ಏನಾಗುತ್ತಿದೆ ಎಂದು ನೋಡಿದಾಗ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಗೋದಾಮಿನಿಂದ ಬೆಂಕಿ ಹತ್ತಿಕೊಂಡಿರುವುದು ಕಂಡು ಬಂತು.

ಬಡಾವಣೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಅಕ್ಕಮಹಾದೇವಿ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ತಡೆಯೊಡ್ಡಿದರು. ಬೇರೆ ಕಡೆ ಹೋಗುವಂತೆ ಸೂಚನೆ ನೀಡಿದರು. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನ ಜೊತೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದರು. ಮಾತ್ರವಲ್ಲ, ಬೆಸ್ಕಾಂನವರು ಈ ಮಾರ್ಗದಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಂಡರು.
ಇನ್ನು ಚಿದಂಬರ ದೀಕ್ಷಿತ್ ಮಾತನಾಡಿ, ''ಮೆಡಿಕಲ್ ಏಜೆನ್ಸಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಂಸ್ಥೆಯ ಕೆಲ ಹುಡುಗರು ಪಟಾಕಿ ಸಿಡಿಸಿದರು. ಪಟಾಕಿಯ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿತಾ, ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಆಗಿದೆಯಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಎಷ್ಟು ನಷ್ಟವಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಬೆಂಕಿ ಹತ್ತಿಕೊಂಡಿದ್ದನ್ನು ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ನಂದಿಸಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ'' ಎಂದು ಮಾಹಿತಿ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ಆನಂದಕುಮಾರ್ ಮಾತನಾಡಿ, ಮೇಲಿನಿಂದ ಸುಟ್ಟಿರುವ ವಾಸನೆ ಬಂತು. ಹೊಗೆಯು ಬರಲಾರಂಭಿಸಿತು. ಕೂಡಲೇ ಏನಾಗುತ್ತಿದೆ ಎಂದು ಎಲ್ಲರೂ ಕಟ್ಟಡದ ಮೇಲೆ ನೋಡಿದರು. ಆಗ ಬೆಂಕಿ ಬರಲಾರಂಭಿಸಿತ್ತು. ಈ ಕಾರಣದಿಂದ ಅಲ್ಲಿಗೆ ಯಾರೂ ಹೋಗಲಿಲ್ಲ. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದರು.












Click it and Unblock the Notifications