ದಾವಣಗೆರೆಯಲ್ಲಿ ಚಿರತೆ ದಾಳಿಗೆ 25 ಕುರಿ ಮೇಕೆಗಳು ಬಲಿ
ದಾವಣಗೆರೆ, ನವೆಂಬರ್ 28; ಜಮೀನಿನಲ್ಲಿರುವ ಕುರಿ ಹಟ್ಟಿ ಮೇಲೆ ದಾಳಿ ನಡೆಸಿದ ಚಿರತೆಯು 25 ಮೇಕೆ ಮತ್ತು ಕುರಿಗಳನ್ನು ತಿಂದು ಹಾಕಿರುವ ಘಟನೆ ತಾಲೂಕಿನ ದಡಗಾರನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಹೊಳಲು ಗೋಣೆಪ್ಪ, ರಾಜಪ್ಪ ಎಂಬುವರಿಗೆ ಸೇರಿದ ಕುರಿ ಹಟ್ಟಿಗೆ ಚಿರತೆಗಳು ನುಗ್ಗಿ 18 ಕುರಿ ಮರಿಗಳು ಮತ್ತು 7 ಮೇಕೆಗಳನ್ನು ಕೊಂದುಹಾಕಿವೆ. ಬೆಳಿಗ್ಗೆ ಮಾಲೀಕ ರಾಜಪ್ಪ ಕುರಿ ಹಟ್ಟಿಯ ಬಳಿ ಹೋದಾಗ ಕುರಿ ಮತ್ತು ಮೇಕೆಗಳು ಮೃತಪಟ್ಟಿರುವುದನ್ನು ಕಂಡು ಕಂಗಲಾಗಿದ್ದಾರೆ.
ಜೀವನಕ್ಕೆ ಆಧಾರವಾಗಿದ್ದ ಕುರಿಗಳು ಚಿರತೆ ಪಾಲಾಗಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ನಮಗೆ ಪರಿಹಾರ ನೀಡಬೇಕೆಂದು ಕುರಿಗಳ ಮಾಲೀಕರು ಅಧಿಕಾರಿಗಳಿಗೆ ಮನವಿ ಮಾಡಿದರು. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ನೀಡಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ.ಶ್ರೀದೇವಿ ಕುರಿ ಮತ್ತು ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ದಡಗಾರನಹಳ್ಳಿ, ಕಾಯಕದಹಳ್ಳಿ, ಶೃಂಗಾರತೋಟ, ಬಾಗಳಿ ಕೂಲಹಳ್ಳಿ ಕೋಡಿಹಳ್ಳಿ, ಕಣವಿಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ರೈತರು ಹೊಲಗಳಿಗೆ ತೆರಳಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ರಾಜಪ್ಪ, ಬೀಚಿ ಅಭಿಮಾನಿ ಬಳಗದ ಅಧ್ಯಕ್ಷ ಶೃಂಗಾರದೋಟ ನಿಂಗರಾಜ್ ಒತ್ತಾಯಿಸಿದ್ದಾರೆ.












Click it and Unblock the Notifications