ಹೆತ್ತ ಮಗುವನ್ನೇ ಕೊಂದು ಸೂಟ್‌ಕೇಸ್‌ನಲ್ಲಿಟ್ಟಿದ್ದ ತಾಯಿ: ಮೃತದೇಹ ಕಂಡು ಕಣ್ಣೀರಿಟ್ಟ ತಂದೆ
ಚಿತ್ರದುರ್ಗ, ಜನವರಿ 10: ನಾಲ್ಕು ವರ್ಷದ ಮಗನನ್ನು ಹೆತ್ತ ತಾಯಿಯೇ ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ತಾಯಿಯಿಂದಲೇ ಕೊಲೆಯಾದ ಮಗುವಿನ ಮೃತದೇಹ ನೋಡಲು ತಂದೆ ವೆಂಕಟರಾಮನ್ ಇಂಡೋನೇಷ್ಯಾದಿಂದ ಬಂದಿದ್ದು, ಮಗುವಿನ ಮೃತದೇಹ ನೋಡಿ ಕಣ್ಣೀರಿಟ್ಟಿದ್ದಾರೆ.
ಮೃತ ಮಗುವಿನ ವೈದ್ಯಕೀಯ ಪರೀಕ್ಷೆ ನಂತರ ಮೃತದೇಹವನ್ನು ಗೋವಾ ಪೊಲೀಸರ ಸಮ್ಮುಖದಲ್ಲಿ ತಂದೆಗೆ ಹಸ್ತಾಂತರ ಮಾಡಲಾಯಿತು. ಪೊಲೀಸರಿಂದ ಮಗುವಿನ ಮೃತದೇಹ ಪಡೆಯುತ್ತಿದ್ದಂತೆ ತಂದೆ ವೆಂಕಟರಾಮನ್ ಕಣ್ಣೀರು ಹಾಕಿದ್ದಾರೆ. ಬಳಿಕ ಅಂಬುಲೆನ್ಸ್ ಮೂಲಕ ಮೃತ ದೇಹ ಬೆಂಗಳೂರಿನ ರಾಜಾಜಿನಗರಕ್ಕೆ ಹಿರಿಯೂರಿನಿಂದ ರವಾನಿಸಲಾಯಿತು.

ಪ್ರಕರಣದ ಹಿನ್ನೆಲೆ ಏನು..?
ಮಗುವನ್ನು ಕೊಂದ ಆರೋಪದ ಮೇಲೆ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಮುಖ್ಯಸ್ಥೆ ಸೂಚನಾ ಸೇಠ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಮಾಜಿ ಪತಿ ತಮ್ಮ ಮಗುವನ್ನು ಭೇಟಿಯಾಗದಂತೆ ತಡೆಯಲು ಈ ಕೃತ್ಯ ಎಸಗಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ಗೋವಾಕ್ಕೆ ತೆರಳಿದ್ದ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್ ಗೋವಾದ ಕಂಡೋಲಿಮಾ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನ ಹತ್ಯೆ ಮಾಡಿದ್ದಾರೆ. ಬಳಿಕ ಸೂಟ್‌ಕೇಸ್‌ನಲ್ಲಿ ಮಗನ ಶವವಿಟ್ಟು ಬಾಡಿಗೆ ಕಾರಿನಲ್ಲಿ ಪರಾರಿಯಾಗಲು ಆರೋಪಿ ಯತ್ನಿಸಿದ್ದು, ಅಪಾರ್ಟ್‌ಮೆಂಟ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಮಹಿಳೆ ತಂಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್ ಸ್ವಚ್ಛಗೊಳಿಸಲು ತೆರಳಿದಾಗ ರಕ್ತದ ಕಲೆ ಪತ್ತೆಯಾಗಿದೆ ಎನ್ನಲಾಗಿದೆ. ಕೂಡಲೇ ಅಪಾರ್ಟ್‌ಮೆಂಟ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆ ವಾಪಸ್ ಹೋಗುವಾಗ ಮಗು ಇಲ್ಲದೇ ಇರುವುದು ತಿಳಿದು ಬಂದಿದೆ.
ಆರೋಪಿ ಮೇಲೆ ಅನುಮಾನಗೊಂಡು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತಕ್ಷಣವೇ ಸೂಚನಾ ಸೇಠ್ ಪ್ರಯಾಣಿಸುತ್ತಿದ್ದ ಕಾರಿನ ಚಾಲಕನ ಜೊತೆ ಮಾತನಾಡಿ ಕಾರನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಕಾರು ಚಾಲಕ ಪೊಲೀಸರು ತಿಳಿಸಿದಂತೆ ಮಾಡಿದ್ದು, ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಈ ವೇಳೆ ಪರಿಶೀಲನೆ ನಡೆಸಿದಾಗ ಕಾರಿನಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಇರುವುದು ತಿಳಿದುಬಂದಿದೆ.
ದಿಂಬಿನಿಂದ ಉಸಿರುಗಟ್ಟಿಸಿ ಮಗುವಿನ ಹತ್ಯೆ ಸಾಧ್ಯತೆ-ಡಾ. ಕುಮಾರ್ ನಾಯ್ಕ್
ಗೋವಾದ ಕಲ್ಲಂಗೂಟ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ಮುಗಿದಿದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಡಾ. ಕುಮಾರ್ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಅವರು ಮಗುವನ್ನು ಕುತ್ತಿಗೆ ಹಿಸಕಿ ಕೊಲೆ ಮಾಡಿರಬಹುದು. ಮಗುವಿನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಉಸಿರು ನಿಲ್ಲುವ ಸಮಯದಲ್ಲಿ ಮೂಗು ಅಥವಾ ಬಾಯಲ್ಲಿ ರಕ್ತ ಬಂದಿದೆ. ಮುಖ ಮತ್ತು ಎದೆ ಭಾಗದಲ್ಲಿ ಊತ ಬಂದಿದೆ. ನಡೆದು ಸುಮಾರು 36 ಗಂಟೆ ಆಗಿರಬಹುದು. ಹತ್ಯೆ ನಡೆಯುವ ವೇಳೆ ಮಗು ಒದ್ದಾಡಿರುವುದು ತಿಳಿದು ಬಂದಿದೆ ಎಂದು ವಿವರಿಸಿದ್ದಾರೆ.











Click it and Unblock the Notifications