Vani Vilasa Sagara: ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆ, ಈಗ ವಿವಿ ಸಾಗರದ ಒಳಹರಿವು ಎಷ್ಟಿದೆ ಗೊತ್ತಾ?
ಚಿತ್ರದುರ್ಗ, ನವೆಂಬರ್, 09: ಕಳೆದ ಒಂದು ವಾರದಿಂದಲೂ ಹಿಂಗಾರು ಚುರುಕು ಪಡೆದಿರುವ ಹಿನ್ನೆಲೆ ರಾಜ್ಯದ ಹಲವು ಜಲಾಶಯಗಳಿಗೆ ಮತ್ತೆ ಜೀವಕಳೆ ಬಂದಂತಾಗಿದೆ. ಹಾಗೆಯೇ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರಿ ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದಲ್ಲೂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಭಾರೀ ಮಳೆ ಹಿನ್ನೆಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 1098 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದ್ದು, 500 ಕ್ಯೂಸೆಕ್ ಹೊರಹರಿವಿದೆ. ಪ್ರಸ್ತುತ ಜಲಾಶಯ ನೀರಿನ ಮಟ್ಟ 120.10 ಅಡಿ ಇದೆ. ಕಳೆದ ವರ್ಷ 135 ಅಡಿ ನೀರು ಸಂಗ್ರಹವಾಗಿ, ಕೋಡಿ ಬಿದ್ದಿತ್ತು.

ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ರೀತಿಯ ನೀರು ಹರಿದು ಬಂದಿಲ್ಲ. ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ನೀರು ಹರಿದು ಬರುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ವಿವಿ ಸಾಗರ ಡ್ಯಾಂಗೆ ಒಂದೆರಡು ಬಾರಿ 1,000 ಕ್ಯೂಸೆಕ್ ನೀರು ಬಂದಿತ್ತು.
ಇನ್ನು ಇಷ್ಟು ದಿನ ಬಿಸಿಲಿನ ಧಗೆಯಿಂದ ತತ್ತರಿಸುತ್ತಿದ್ದ ಕೋಟೆ ನಾಡು ಈಗ ಭಾರೀ ಮಳೆಯಿಂದ ತಂಪಾಗಿದೆ. ಮತ್ತೊಂದೆಡೆ ಮಳೆ ಇಲ್ಲದ ಮುಗಿಲು ನೋಡುತ್ತಾ ಬರದ ದವಡೆಗೆ ಸಿಕ್ಕಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಬುಧವಾರ 20.33 ಮಿಲಿ ಮೀಟರ್ ಸರಾಸರಿ ಮಳೆಯಾಗಿದೆ. ಹಿರಿಯೂರು-8.4 ಮಿಲಿ ಮೀಟರ್, ಬಬ್ಬೂರು10.6 ಮಿಲಿ ಮೀಟರ್, ಇಕ್ಕನೂರು 34.2 ಮಿಲಿ ಮೀಟರ್, ಈಶ್ವರಗೆರೆ 78.6 ಮಿಲಿ ಮೀಟರ್, ಸೂಗೂರು 38.2 ಮಿಲಿ ಮೀಟರ್ ಮಳೆಯಾದರೆ, ಜವನಗೊಂಡನಹಳ್ಳಿಯಲ್ಲಿ ಸುಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ.
ಹೊಸದುರ್ಗ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು 32.22 ಸರಾಸರಿ ಮಳೆಯಾಗಿದೆ. ಹೊಸದುರ್ಗ 17.4 ಮಿಲಿ ಮೀಟರ್, ಬಾಗೂರು 30.1 ಮಿಲಿ ಮೀಟರ್, ಮತ್ತೋಡು 15.2 ಮಿಲಿ ಮೀಟರ್, ಶ್ರೀರಾಂಪುರ 50.2 ಮಿಲಿ ಮೀಟರ್, ಮಾಡದಕೆರೆಯಲ್ಲಿ 48.2 ಮಿಲಿ ಮೀಟರ್ ಮಳೆಯಾಗಿದೆ.
ಇನ್ನು ಚಿತ್ರದುರ್ಗ 2, 49 ಮಿಲಿ ಮೀಟರ್, ತುರುವನೂರು 65.4 ಮಿಲಿ ಮೀಟರ್, ಹಿರೇಗೊಂಟನೂರು-3.1 ಮಿಲಿ ಮೀಟರ್, ಭರಮಸಾಗರ -25.2 ಮಿಲಿ ಮೀಟರ್, ಸಿರಿಗೆರೆ 38.0 ಮಿಲಿ ಮೀಟರ್, ಐನಹಳ್ಳಿಯಲ್ಲಿ 66.4 ಮಿಲಿ ಮೀಟರ್ ಮಳೆ ಸುರಿದಿದೆ.












Click it and Unblock the Notifications