Vani Vilasa Sagara: ಕಳೆದ ವರ್ಷ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿದ್ದ ಜಲಾಶಯಕ್ಕೆ ಈ ಬಾರಿ ಒಳಹರಿವು ಎಷ್ಟಿದೆ ಗೊತ್ತಾ?
ಚಿತ್ರದುರ್ಗ, ನವೆಂಬರ್, 26: ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಕಳೆದ ಬಾರಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಹಾಗಾದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದಿರುವ ನೀರಿನ ಅಂಕಿಅಂಶ ಎಷ್ಟಿದೆ ತಿಳಿಯೋಣ ಬನ್ನಿ.
ಪ್ರಸ್ತುತ ವರ್ಷದಲ್ಲಿ ಮಳೆಯ ಅಭಾವ ಉಂಟಾಗಿದ್ದರಿಂದ ಜಲಾಶಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ದಾಖಲೆಯ ನೀರು ಹರಿದು ಬಂದಿಲ್ಲ. ಜನವರಿಯಿಂದ ಇವತ್ತಿನ ನವೆಂಬರ್ 26 ದಿನದ ವರದಿಯಲ್ಲಿ 30.422ಟಿಎಂಸಿ ನೀರು ಜಲಾಶಯದಲ್ಲಿತ್ತು. 2023ರ ವರ್ಷದಲ್ಲಿ ಡ್ಯಾಂಗೆ ಕೇವಲ 4,037 ಕ್ಯೂಸೆಕ್ ನೀರು ಅಂದರೆ 0.34ಟಿಎಂಸಿ ಮಾತ್ರ ಹರಿದು ಬಂದಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 21.47 ಟಿಎಂಸಿ ಇದೆ.

ಈ ವರ್ಷದಲ್ಲಿ 3.87ಟಿಎಂಸಿ ಅಂದರೆ 44,545 ಕ್ಯೂಸೆಕ್ ನೀರು ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಬಿಡಲಾಗಿದೆ. (ಜೊತೆಗೆ ಆವಿಯಾಗುವ ಮತ್ತು ಕುಡಿಯುವ ನೀರಿಗೆ ನೀರನ್ನು ಹೊರತುಪಡಿಸಿದೆ). ಜುಲೈ 12ರಂದು 652, ಜುಲೈ 25ರಂದು 999 ಹಾಗೂ 26ರಂದು 638 ಕ್ಯೂಸೆಕ್ ನೀರು ಸಂಗ್ರಹವಾಗಿತ್ತು. ನಂತರ ನವೆಂಬರ್‌ನಲ್ಲಿ 1,098 ಮತ್ತು 650 ಕ್ಯೂಸೆಕ್ ನೀರು ಮಾತ್ರ ಜಲಾಶಯಕ್ಕೆ ನೀರು ಹರಿದುಬಂದಿದೆ. ಇತ್ತ ಹಿರಿಯೂರು ತಾಲ್ಲೂಕಿನಾದ್ಯಂತ ಇತ್ತೀಚೆಗಷ್ಟೇ ಅಲ್ಪಸ್ವಲ್ಪ ಮಳೆಯಾಗಿತ್ತು. ನವೆಂಬರ್ 7ರಂದು ಇಕ್ಕನೂರಿನಲ್ಲಿ 88.8 ಮಿಮೀ ಅತಿ ಹೆಚ್ಚು ಮಳೆಯಾಗಿತ್ತು.
ಎಲ್ಲೆಲ್ಲಿ ಎಷ್ಟು ಮಳೆ?
1. ಹಿರಿಯೂರು-38.6 ಮಿಮೀ
2. ಬಬ್ಬೂರು-30.8 ಮಿಮೀ
3. ಇಕ್ಕನೂರು-88.8 ಮಿಮೀ
4. ಈಶ್ವರಗೆರೆ -66.2 ಮಿಮೀ
5. ಸೂಗೂರಿನಲ್ಲಿ-64.3 ಮಿಮೀ ಮಳೆಯಾದರೆ
ನವೆಂಬರ್ 9ರಂದು ಹಿರಿಯೂರು ತಾಲ್ಲೂಕಿನಲ್ಲಿ ಬುಧವಾರ 28.33 ಮಿಮೀ ಸರಾಸರಿ ಮಳೆಯಾಗಿತ್ತು. ಹಿರಿಯೂರು-8.4 ಮಿಲಿ ಮೀಟರ್, ಬಬ್ಬೂರು-10.6 ಮಿಲಿ ಮೀಟರ್, ಇಕ್ಕನೂರು-34.2 ಮಿಲಿ ಮೀಟರ್, ಈಶ್ವರಗೆರೆ-78.6 ಮಿಲಿ ಮೀಟರ್, ಸೂಗೂರು-38.2 ಮಿಲಿ ಮೀಟರ್ ಮಳೆಯಾದರೆ, ಜವನಗೊಂಡನಹಳ್ಳಿಯಲ್ಲಿ ಸುಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿತ್ತು.
ಮೊದಲ ಬಾರಿಗೆ ಜಲಾಶಯಕ್ಕೆ 1932ರಲ್ಲಿ 125.50 ಅಡಿ, 1933ರಲ್ಲಿ 135.25 ಅಡಿ, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿ ದಾಖಲೆ ಬರೆದಿತ್ತು.
2022ರ ಸಾಲಿನಲ್ಲಿ 1958ರ ದಾಖಲೆಯನ್ನು ಹಿಂದಿಕ್ಕಿ ಡ್ಯಾಂ ನೀರಿನ ಮಟ್ಟ 130 ಅಡಿ ನೀರು ಸಂಗ್ರಹವಾಗುವ ಮೂಲಕ ಇತಿಹಾಸ ಸೃಷ್ಟಿಸಿತ್ತು.
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ಎಂಬ ನದಿಯನ್ನು ಸೇರಿ ಅವು ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ. ಇನ್ನೂ ವಾಣಿವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. 1906 ರಲ್ಲಿ ಮೈಸೂರು ಒಡೆಯರ ಕಾಲದಲ್ಲಿ ಹಿರಿಯೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಅನುಕೂಲವಾಗುವಂತೆ ವಾಣಿವಿಲಾಸಪುರ ಬಳಿ ವಾಣಿವಿಲಾಸ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.












Click it and Unblock the Notifications