Vani Vilasa Sagara Dam: 126.60 ಅಡಿ ತಲುಪಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ವಾಣಿ ವಿಲಾಸ ಸಾಗರ ಜಲಾಶಯ.!
Vani Vilasa Sagara Dam: ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದವು. ಇನ್ನೂ ಕೆಲವು ಮಾತ್ರ ತುಂಬುವ ಹಂತದಲ್ಲಿದ್ದವು. ಹಾಗೆಯೇ ಇದೀಗ ಹಿರಿಯೂ ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಲು ಇನ್ನೂ ಕೆಲವೇ ಅಡಿಗಳು ಮಾತ್ರ ಬಾಕಿಯಿದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಡ್ಯಾಂ ಕೋಡಿ ಬೀಳಲು ಕೇವಲ 3.40 ಅಡಿ ನೀರು ಬರಬೇಕಿದೆ. ಇಷ್ಟು ನೀರು ಬಂದಲ್ಲಿ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಇಂದಿನ ವರದಿಯಲ್ಲಿ ಜಲಾಶಯಕ್ಕೆ 1,964 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ.

ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 126.60 ಆಡಿ ತಲುಪಿದೆ. ಇನ್ನು ಕೇವಲ ಮೂರುವರೆ ಅಡಿಯಷ್ಟು ನೀರು ಬಂದರೆ, ಡ್ಯಾಂ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. 1933ರಲ್ಲಿ 135.25 ಅಡಿ ತುಂಬುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು. ನಂತರ 89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಜಲಾಶಯ ಮೈದುಂಬಿ ಹರಿದಿತ್ತು.
ಕಳೆದ ವರ್ಷ ಅಂದರೆ 2023ರಲ್ಲಿ ಜಲಾಶಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಒಳಹರಿವು ನೀರು ಬಂದಿರಲಿಲ್ಲ. ಒಂದು ವೇಳೆ ಹಿಂದಿನ ವರ್ಷದಲ್ಲಿ ಒಳಹರಿವು ಬಂದಿದ್ದರೇ ಇಷ್ಟೋತ್ತಿಗೆ ಡ್ಯಾಂ ಕೋಡಿ ಬೀಳುತ್ತಿತ್ತು. ಇನ್ನು ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದರೇ ಮುಂದಿನ ನವೆಂಬರ್ ತಿಂಗಳಲ್ಲಿ ಡ್ಯಾಂ ಕೋಡಿ ಬೀಳಲಿದೆ. ಜಲಾಶಯ ಒಟ್ಟು 135 ಅಡಿ ಎತ್ತರ ಇದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚು ಇರುವುದರಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಬೇಸಿಗೆ ಹಂಗಾಮಿನಲ್ಲಿ ಎಡ ಮತ್ತು ಬಲನಾಲೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.
ಪ್ರವಾಸಿಗರನ್ನು ಸೆಳೆಯುತ್ತಿರುವ ವಿವಿ ಸಾಗರ: ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.
ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಣೆ ಮಾಡಬಹುದಾಗಿದೆ.












Click it and Unblock the Notifications