Vani Vilasa Sagara Dam: ಮಳೆ ಇಲ್ಲದಿದ್ರೂ ವಾಣಿ ವಿಲಾಸ ಜಲಾಶಯಕ್ಕೆ 1,039 ಕ್ಯೂಸೆಕ್ ಒಳಹರಿವು-ಈಗಿನ ನೀರಿನ ಮಟ್ಟ ಎಷ್ಟಿದೆ.?
Vani Vilasa Sagara Dam: ಈ ಬಾರಿ ಸುರಿದ ಮುಂಗಾರು ಮಳೆಯಿಮದ ಬಹುತೇಕ ಜಿಲ್ಲೆಗಳಲ್ಲಿ ಜಲಾಶಯಗಳು ತುಂಬಿವೆ. ಆದರೆ ಈ ಬಾರಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಆದರೂ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಒಳಹರಿವಿನ ಪ್ರಮಾಣ ಮಾತ್ರ ಹೆಚ್ಚಾಗುತ್ತಲಿದೆ. ಹಾಗಾದರೆ ಇದು ಹೇಗೆ ಸಾಧ್ಯ ಎಂದು ಇಲ್ಲಿ ತಿಳಿಯಿರಿ.
ಜಿಲ್ಲೆಯ ರೈತರ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಾಗಿದೆ. ಭಾನುವಾರ (ಸೆಪ್ಟೆಂಬರ್ 29) ರಾತ್ರಿ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗಿರುವುದರಿಂದ 1,039 ಸಾವಿರ ಕ್ಯೂಸೆಕ್ ಒಳಹರಿವು ನೀರು ಜಲಾಶಯಕ್ಕೆ ಹೆಚ್ಚಿದೆ.

ಭದ್ರಾದಿಂದ 550ರಿಂದ 693 ಕ್ಯೂಸೆಕ್ ಬರುತಿದ್ದ ನೀರು 1,039ಕ್ಕೆ ಹೆಚ್ಚಳವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 120.60 ಅಡಿ ತಲುಪಿದೆ. ಜಲಾಶಯದ ಒಟ್ಟು ಎತ್ತರ 135 ಅಡಿ ಇದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. ಡ್ಯಾಂ ಒಟ್ಟು 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ.
ಹಿರಿಯೂರು ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ಇಕ್ಕನೂರಿನಲ್ಲಿ 50.2 ಮಿಲಿ ಮೀಟರ್ ಅತೀ ಹೆಚ್ಚು ಮಳೆಯಾಗಿದೆ. ಹಿರಿಯೂರಿನಲ್ಲಿ 26.4 ಮಿಲಿ ಮೀಟರ್, ಬಬ್ಬೂರು 26 ಮಿಲಿ ಮೀಟರ್ ಹಾಗೂ ಈಶ್ವರಗೆರೆಯಲ್ಲಿ 5.2 ಮಿಲಿ ಮೀಟರ್ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ನಿರ್ಮಿಸಲಾಗಿತ್ತು. 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಡ್ಯಾಂ ನಿರ್ಮಿಸಿ 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿವಿಲಾಸ ಸಾಗರದ ನೀಲನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
2019ರಲ್ಲಿ ಡೆಡ್ ಸ್ಟೋರೇಜ್ ತಲುಪಿದ್ದ ಡ್ಯಾಂ: ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬತ್ತಿ ಹೋಗಿ ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ, ವರ್ಷಗಳು ಕಳೆದಂತೆ ನೀರಿನ ಮಟ್ಟ ಹೆಚ್ಚಾಗುವ ಹಂತಕ್ಕೆ ಬಂದು ನಿಂತಿತು. ಇದರಿಂದ ಹಿರಿಯೂರು ತಾಲೂಕಿನ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಚಿಗುರು ಬಂದಿದೆ. ಹೊಸದುರ್ಗ, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ 800ರಿಂದ 1,000 ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ.
ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ-ಮುತ್ತಲಿನ ಜಮೀನಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 100ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ನೋಡುಗರನ್ನು ಆಕರ್ಷಿಸುತ್ತಿದೆ. ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ರೈತ ಸಮುದಾಯದಲ್ಲಿ ಹೊಸ ಚೈತನ್ಯ ಮೂಡಿಸಿದರೆ, ಮತ್ತೊಂದು ಕಡೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದಂತಾಗಿದೆ.











Click it and Unblock the Notifications