Vani Vilasa Sagara: ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ?-ಮೇ 17ರ ಅಂಕಿಅಂಶಗಳ ವಿವರ ಹೀಗಿದೆ
Vani Vilasa Sagara Dam: ಇದೀಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಶುರುವಾಗಿದೆ. ಅಲ್ಲದೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರ ಮಳೆ ಮುಂದುವರೆಯಲಿದ್ದು, ಇದು ನಿಜವಾದರೆ, ಜಲಮೂಲಗಳಿಗೆ ಜೀವಕಳೆ ಬಂದಂತಾಗುತ್ತದೆ. ಈಗಾಗಲೇ ಧಾರಾಕಾರ ಮಳೆಯಿಂದ ಹಲವು ಜಲಾಶಯಗಳಿಗೆ ಸ್ವಲ್ಪ ಮಟ್ಟಿಗೆ ನೀರು ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಮಧ್ಯ ಕರ್ನಾಟಕದ ಬಯಲು ಸೀಮೆಯ ಜೀವನಾಡಿಯಲ್ಲಿ ಪ್ರಸ್ತುತ ನೀರಿನ ಪ್ರಮಾಣ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಧ್ಯ ಕರ್ನಾಟಕದ ಬಯಲು ಸೀಮೆಯ ಏಕೈಕ ಜೀವ ನಡೆಯಾಗಿರುವ ಕೋಟಿನಾಡು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯದಲ್ಲಿ ಇಂದು (ಮೇ 17) ನೀರಿನ ಮಟ್ಟ 111.55 ಅಡಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಹ ಪೂರ್ವ ಮುಂಗಾರು ಮಳೆ ಆರಂಭವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಆದರೆ ಕೆರೆ ಕಟ್ಟೆ, ಹಳ್ಳ ಕೊಳ್ಳ ತುಂಬಿ ಹರಿಯುವಂತೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಬದಲಿಗೆ ಹದವಾದ ಮಳೆಯಾಗಿದೆ.
ಇನ್ನು ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಯಾವುದೇ ಒಳಹರಿವಿನ ಸಂಗ್ರಹವಾಗಿಲ್ಲ. 89 ವರ್ಷಗಳ ಬಳಿಕ 2022ರಲ್ಲಿ ವಿವಿ ಸಾಗರ ಜಲಾಶಯದಲ್ಲಿ 135 ಅಡಿ ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಕೊಡಿಬಿದ್ದು ಇತಿಹಾಸ ನಿರ್ಮಾಣವಾಗಿತ್ತು. ಇನ್ನು ಕಳೆದ ವರ್ಷ ಮಳೆ ಬಾರದ ಹಿನ್ನೆಲೆ ಜಲಾಶಯಕ್ಕೆ ಯಾವುದೇ ಪ್ರಮಾಣದ ಒಳಹರಿವು ನೀರು ಸಂಗ್ರಹವಾಗಲಿಲ್ಲ. ಈ ಬಾರಿಯಾದರೂ ಬರಲಿದೆಯಾ ಎಂದು ಕಾದುನೋಡಬೇಕಿದೆ ಅಷ್ಟೇ.
ವಿವಿ ಸಾಗರ ನೀರಿನ ಪ್ರಮಾಣದ ವಿವರ: ವಿವಿ ಸಾಗರ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯವು 30.422 ಟಿಎಂಸಿಗಳಾಗಿದ್ದು, ಜಲಾಶಯದ ವ್ಯಾಪ್ತಿಯಲ್ಲಿ ಒಟ್ಟು 12,135.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಇದರಲ್ಲಿ ಪ್ರಮುಖವಾಗಿ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ 5,557.00 ಹೆಕ್ಟೇರ್ ಆಗಿರುತ್ತದೆ. ಉಳಿದಂತೆ 6,578.00 ಹೆಕ್ಟೇರ್ ಖುಷ್ಕಿ ಜಮೀನು ಇರುತ್ತದೆ.
ಮೇ 08ರ ವರದಿಯಲ್ಲಿ ವಿವಿ ಸಾಗರ ಜಲಾಶಯದಲ್ಲಿ 112 ಅಡಿಗಳಷ್ಟು ನೀರಿನ ಸಂಗ್ರಹವಿದ್ದು, ಈ ಮಟ್ಟಕ್ಕೆ ನೀರಿನ ಸಂಗ್ರಹಣೆಯು 16.96 ಟಿಎಂಸಿಗಳಾಗಿದ್ದು, ಇದರಲ್ಲಿ 1.87 ಟಿಎಂಸಿ ಬಳಕೆಗೆ ಬಾರದ ಪ್ರಮಾಣ ಆಗಿರುತ್ತದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 15.09 ಟಿಎಂಸಿ ಇರುತ್ತದೆ.
ಹಿರಿಯೂರು, ಚಿತ್ರದುರ್ಗ ಪಟ್ಟಣಗಳ ಕುಡಿಯುವ ನೀರಿಗಾಗಿ ಮತ್ತು ಚಳ್ಳಕೆರೆ ಪಟ್ಟಣ, ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳ ಕುಡಿಯುವ ನೀರಿಗಾಗಿ ಒಟ್ಟು 0.2115 ಟಿಎಂಸಿ ಅವಶ್ಯಕವಾಗಿರುತ್ತದೆ.
ಹಾಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದಿಂದ ಮಳೆಗಾಲದ ಬೆಳೆ ಹಾಗೂ ತೋಟಗಾರಿಕೆ ಹದ ನೀರನ್ನು 30 ದಿನ ಹರಿಸಿದರೆ, ಸರಾಸರಿ ನೀರಿನ ಪ್ರಮಾಣ ಸುಮಾರು 1.40 ಟಿಎಂಸಿ ಬೇಕಾಗಲಿದೆ.
ಆವಿಯಾಗುವ ನೀರಿನ ಪ್ರಮಾಣ ಸುಮಾರು 0.516 ಟಿಎಂಸಿ, ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 2.127 ಟಿಎಂಸಿ, ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 14.83 ಟಿಎಂಸಿ (111.55 ಅಡಿಗಳು) ಇರಲಿದೆ.
ಮೇಲ್ಮಟ್ಟದ ಕಾಲುವೆ ಅಚ್ಚುಕಟ್ಟು ಪ್ರದೇಶದ 03 ಗ್ರಾಮಗಳು, ಬಲನಾಲ ಅಚ್ಚುಕಟ್ಟು ಪ್ರದೇಶದ 21 ಗ್ರಾಮಗಳು ಹಾಗೂ ಎಡನಾಲ ಅಚ್ಚುಕಟ್ಟು ಪ್ರದೇಶದ 18 ಗ್ರಾಮಗಳು ಹಾಗೂ ನಾಲೆಗಳಲ್ಲಿ ನೀರನ್ನು ಬಿಟ್ಟಾಗ ಹಿರಿಯೂರು ತಾಲ್ಲೂಕಿನ 38 ಗ್ರಾಮಗಳ ಅಂತರ್ಜಲ ಅಭಿವೃದ್ಧಿಯಾಗಿ ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನೂ ಸಹ ಸುಧಾರಿಸಬಹುದಾಗಿದೆ.
ನಾಲೆಗಳಿಗೆ ನೀರು: ತಾಲೂಕಿನಲ್ಲಿ ಮಳೆ ಇಲ್ಲದೆ ಬರಗಾಲದ ಹಿನ್ನೆಲೆ, ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ವಾಣಿ ವಿಲಾಸ ಜಲಾಶಯದಿಂದ ಮೇ 10ರಿಂದ 25 ದಿನಗಳ ಕಾಲ ಇಲ್ಲಿನ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಹರಿಸಲಾಗುತ್ತಿದೆ.
ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ 2023-24ನೇ ಸಾಲಿನಲ್ಲಿ ಅತೀ ಕಡಿಮೆ ಮಳೆಯಾಗಿರುವುದರಿಂದ, ರೈತರ ಜಮೀನುಗಳಿಗೆ ನೀರು ಹರಿಸುವುದು ಅವಶ್ಯವಿರುತ್ತದೆ. ಈ ಹಿನ್ನೆಲೆ ವಾಣಿ ವಿಲಾಸ ಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರನ್ನು ಎಡ ಮತ್ತು ಬಲ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ.












Click it and Unblock the Notifications