Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಮತ್ತೆ ಹೆಚ್ಚಳ-ಅಂಕಿಅಂಶಗಳ ವಿವರ ಇಲ್ಲಿದೆ
Vani Vilasa Sagara Dam: ಈಗಾಗಲೇ ಭಾರೀ ಮಳೆಯಿಂದ ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ತುಂಬಿದ್ದು, ಇನ್ನು ಕೆಲವು ಭರ್ತಿಯಾಗುವ ಹಂತವನ್ನು ತಲುಪಿವೆ. ಇನ್ನೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಗಾರದ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
30 ಟಿಎಂಸಿ (135 ಅಡಿ) ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಬಯಲು ಸೀಮೆಯ ರೈತರ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ 117.10 ಅಡಿ ತಲುಪಿದೆ. ಇನ್ನೂ ಮಳೆ ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ 120 ಅಡಿ ದಾಟಿದರೂ ಆಶ್ಚರ್ಯವಿಲ್ಲ.

ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಮತ್ತೊಂದು ಕಡೆ ಭದ್ರಾ ಜಲಾಶಯದಿಂದ ವಾಣಿನ ವಿಲಾಸ ಸಾಗರ ಡ್ಯಾಂಗೆ ನೀರು ಹರಿಸಲಾಗಿದ್ದು, ಪ್ರತಿದಿನ ಭದ್ರಾದಿಂದ 700 ಕ್ಯೂಸೆಕ್ ನೀರು ಸಂಗ್ರಹವಾಗುತ್ತಿದೆ. ಜೊತೆಗೆ ಇಂದಿನ ವರದಿಯಲ್ಲಿ 1,456 ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.10 ಅಡಿ ತಲುಪಿದೆ. ಹೀಗೆ ನೀರು ಹೆಚ್ಚು ಬಂದರೆ ಇನ್ನೂ ಕೆಲವೇ ದಿನಗಳಲ್ಲಿ 120 ಅಡಿ ತಲುಪುವ ಸಾಧ್ಯತೆಯಿದೆ.
ಚಿಕ್ಕಮಗಳೂರು, ಅಜ್ಜಂಪುರ ಭಾಗದಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆ ವಾಣಿ ವಿಲಾಶ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ ಆಗಿದೆ. ಶನಿವಾರ 2,668 ಕ್ಯೂಸೆಕ್ ಒಳಹರಿವು ನೀರು ಹರಿದು ಬಂದಿದ್ದು, ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಿದೆ. ಇದರಿಂದ ಜಲಾಶಯದ ನೀರಿನ ಮಟ್ಟ 116.65 ಅಡಿ ಇತ್ತು. ಇದೀಗ ಇಂದು (ಆಗಸ್ಟ್ 20) ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.10 ಅಡಿಗೆ ತಲುಪಿದೆ.
ಡ್ಯಾಂ ಒಟ್ಟು 135 ಅಡಿ ಎತ್ತರದಲ್ಲಿದ್ದು, ಕಳೆದ 2022ರಲ್ಲಿ ಡ್ಯಾಂ ಕೋಡಿ ಬಿದ್ದಿತ್ತು. 2023ರಲ್ಲಿ ಮಳೆ ಇಲ್ಲದ ಕಾರಣ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ಒಳಹರಿವು ನೀರು ಬಂದಿರಲಿಲ್ಲ. ಇದೀಗ ಈ ವರ್ಷದಲ್ಲಿ ಸುಮಾರು 5ರಿಂದ 6 ಅಡಿ ನೀರು ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ ನೀರಿನ ಅಭಾವ ಹೆಚ್ಚಿದ್ದ ನಿಟ್ಟಿನಲ್ಲಿ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಣಿ ವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1,907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಲಾಶಯ ನಿರ್ಮಾಣ ಮಾಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಬಳಿ ಮರಿಕಣಿವೆ ಅಥವಾ ವಾಣಿ ವಿಲಾಸ ಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.
ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್‌ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಎಂಜಿನಿಯರ್ ನೇತೃತ್ವದ ತಂಡವು ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತಿದೆ.
ನೀರಿನಲ್ಲಿ ಕೊಚ್ಚಿ ಹೋದ ಯುವಕ: ಮತ್ತೊಂದೆಡೆ ಇದೀಗ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕ, ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಬಳಿ ಘಟನೆ ನಡೆದಿದೆ. ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದ ಶಿವು (35) ವರ್ಷ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಸೇರಿಕೊಂಡು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.












Click it and Unblock the Notifications