Vani Vilasa Sagara Dam: ಮೂರನೇ ಬಾರಿ ದಾಖಲೆ ನಿರ್ಮಿಸಲು ಸಜ್ಜಾದ ವಾಣಿ ವಿಲಾಸ ಸಾಗರ ಜಲಾಶಯ-ನೀರಿನ ಮಟ್ಟ ಎಷ್ಟಿದೆ ತಿಳಿಯಿರಿ
Vani Vilasa Sagara Dam: ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಈಗಾಗಲೇ ಭಾರೀ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದು, ಇನ್ನೂ ಕೆಲವೇ ಡ್ಯಾಂಗಳು ಮಾತ್ರ ಭರ್ತಿಯಾಗುವ ಸನಿಹದಲ್ಲಿವೆ. ಹಾಗೆಯೇ ಚಿತ್ರದುರ್ಗ ಜಿಲ್ಲೆ ರೈತರ ಏಕೈಕ ಜೀವನಾಡಿಯಾದ ವಾಣಿ ವಿಲಾಸ ಜಲಾಶಯ ತಂಬಲು ಇನ್ನೂ ಕೆಲವೇ ಅಡಿಗಳು ಮಾತ್ರ ಬಾಕಿಯಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ರೈತರ ಜೀವನಾಡಿ ಆಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ 125 ತಲುಪಿದೆ. ಮಂಗಳವಾರ ರಾತ್ರಿ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

ಇನ್ನು ಮಂಗಳವರ ಒಂದೇ ದಿನ 4,852 ಕ್ಯೂಸೆಕ್ ಒಳಹರಿವು ನೀರು ಹರಿದು ಬಂದಿದ್ದು, ಇದರಿಂದ ಜಲಾಶಯದಲ್ಲಿ 125 ಅಡಿ ತಲುಪಿದೆ. ಡ್ಯಾಂ ಕೋಡಿ ಬೀಳಲು ಕ್ಷಣಗಣನೆ ಆರಂಭವಾಗಿದ್ದು, ಜಲಾಶಯ ಭರ್ತಿಗೆ ಕೇವಲ 5 ಅಡಿ ನೀರು ಬರಬೇಕಿದೆ.
ಪ್ರಸಕ್ತ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದರೆ ಮೂರನೇ ಬಾರಿಗೆ ಕೋಡಿ ಬಿದ್ದ ಖ್ಯಾತಿ ಪಡೆಯಲಿದೆ. 1907ರಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಜಲಾಶಯ ಒಟ್ಟು 135 ಅಡಿ ಎತ್ತರದ ಇದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
ಪ್ರಸಕ್ತ ಸಾಲಿನ ಸುಮಾರು ಸುಮಾರು 13 ಅಡಿಗಳಷ್ಟು ನೀರು ಬಂದಿದೆ. ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚು ಇರುವುದರಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಬೇಸಿಗೆ ಹಂಗಾಮಿನಲ್ಲಿ ಎಡ ಮತ್ತು ಬಲನಾಲೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.
ಹಳೆಯ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ಕೂಡ ಒಂದಾಗಿದೆ ಎನ್ನಬಹುದು. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 115 ವರ್ಷಗಳ ಕಾಲ ಇತಿಹಾಸವಿದೆ. 1935ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು.
ಇದಾದ ಬಳಿಕ 2022ರಲ್ಲಿ ಎರಡನೇ ಬಾರಿಗೆ 135 ಅಡಿ ನೀರು ಸಂಗ್ರಹವಾಗಿ ಡ್ಯಾಂ ಕೋಡಿ ಬಿದ್ದು, ಐತಿಹಾಸಿಕ ಸಾಧನೆಗೆ ಕಾರಣವಾಗಿತ್ತು. ಈ ವರ್ಷದಲ್ಲಿ 5 ಅಡಿ ನೀರು ಬಂದರೆ ಡ್ಯಾಂ ಕೋಡಿ ಬೀಳಲಿದೆ.
ಹೆಚ್ಚು ನೀರು ಸಂಗ್ರಹವಾದ ವರ್ಷ: 1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದು ಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ124.50 ಅಡಿ, 2021ರಲ್ಲಿ 125.50 ಅಡಿ 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಪ್ರವಾಸಿಗರಿಗೆ ಮಾಹಿತಿ: ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.
ಹುಬ್ಬಳ್ಳಿ, ದಾವಣಗೆರೆಯಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಲಭಾಗದ ವಿವಿ ಪುರ ಕ್ರಾಸ್ ಮೂಲಕ ಜಲಾಶಯಕ್ಕೆ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಪ್ರವಾಸಿಗರು ಹೊಸದುರ್ಗದಿಂದ ಹಿರಿಯೂರು ಮಾರ್ಗವಾಗಿ ಬಲಭಾಗದ ಮೂಲಕ ತೆರಳಿ ಡ್ಯಾಂ ವೀಕ್ಷಣೆ ಮಾಡಬಹುದಾಗಿದೆ. ಒಟ್ಟಿನಲ್ಲಿ ಜಲಾಶಯ ವೀಕ್ಷಣೆ ಮಾಡಲು ಇದೇ ಉತ್ತಮ ಸಮಯ. ಯಾಕೆಂದರೆ ಇದೀಗ ಜಲಾಶಯದ ಒಳಹರಿವು ಕೂಡ ಹೆಚ್ಚಾಗಿದ್ದು, ಈ ವೇಳೆ ಡ್ಯಾಂ ವೀಕ್ಷಣೆ ಮಾಡುವುದೇ ಒಂಥರಾ ಮಜಾ.












Click it and Unblock the Notifications