Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯಕ್ಕೆ 4,737 ಕ್ಯೂಸೆಕ್ ಒಳಹರಿವು: ಜುಲೈ 30ರ ನೀರಿನ ಮಟ್ಟ ಎಷ್ಟು.?
Vani Vilasa Sagara Dam: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳು ಈಗಾಗಲೇ ಭರ್ತಿಯಾಗಿದ್ದರೆ, ಇನ್ನು ಕೆಲವು ತುಂಬುವ ಹಂತವನ್ನು ತಲುಪಿವೆ. ಹಾಗೆಯೇ ಇದೀಗ ಮಧ್ಯ ಕರ್ನಾಟಕದ ಬಯಲು ಸೀಮೆಯ ರೈತರ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಹರಿದುಬರುತ್ತಿದೆ. ಹಾಗಾದರೆ ಇದೀಗ ಪ್ರಸ್ತುತ ಇಂದು (ಜುಲೈ 30) ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಇಂದು (ಜುಲೈ 30) ಮಂಗಳವಾರ 4,737 ಕ್ಯೂಸೆಕ್ ಒಳಹರಿವು ನೀರು ಹೆಚ್ಚಳವಾಗಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಇಂದಿಗೆ 114.25 ಅಡಿ ಇದೆ. ಜಲಾಶಯ ಒಟ್ಟು ನೀರಿನ ಸಾಮರ್ಥ್ಯ 130 ಅಡಿ ಇದೆ. ಇನ್ನು ನಿನ್ನೆ (ಜುಲೈ 29) ಜಲಾಶಯಕ್ಕೆ 974 ಕ್ಯೂಸೆಕ್ ಒಳಹರಿವು ನೀರು ಹರಿದು ಬಂದಿದ್ದು, ಈ ಮೂಲಕ ನೀರಿನ ಮಟ್ಟ 113.50 ಅಡಿ ಇತ್ತು. ಇದೀಗ ಇಂದು ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಮೈದುಂಬಿ ಹರಿಯುತ್ತಿದ್ದು, ನೀರು ಸರಾಗವಾಗಿ ವೇದಾವತಿ ನದಿ ಮೂಲಕ ವಾಣಿ ವಿಲಾಸ ಜಲಾಶಯ ಸೇರುತ್ತದೆ. ಮತ್ತೊಂದು ಕಡೆ ಭದ್ರಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗಿಡಲಾಗಿದೆ. ಈ ನೀರನ್ನು ವಾಣಿವಿಲಾಸ ಜಲಾಶಯಕ್ಕೆ ಹರಿಸುವಂತೆ ಚಿತ್ರದುರ್ಗ ಭಾಗದ ರೈತರು ಆಗ್ರಹಿಸುತ್ತಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಗಿರಿ ಕಂದಕಗಳಲ್ಲಿ ವೇದ ಮತ್ತು ಆವತಿ ಎಂಬ ಎರಡು ನದಿಗಳು ಸಂಗಮವಾಗಿ ಮುಂದೆ ಹರಿಯುವ ನದಿಯೇ ವೇದಾವತಿ ನದಿ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1898ರಲ್ಲಿ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ, 45 ಲಕ್ಷ ರೂಪಾಯಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಯಿತು. 1907ರ ವೇಳೆಗೆ ವಾಣಿ ವಿಲಾಸ ಸಾಗರವನ್ನು ಲೋಕಾರ್ಪಣೆ ಮಾಡುವ ಮೂಲಕ ಈ ಭಾಗದ ರೈತರಿಗೆ ನೀರಿನ ಬವಣೆಯನ್ನು ನೀಗಿಸಿದರು.
ಜಲಾಶಯ ನಿರ್ಮಾಣದ ಬಳಿಕ 1933ರಲ್ಲಿ ಒಮ್ಮೆ ಕೋಡಿ ಬಿದ್ದಿತ್ತು. ಇದಾದ ಬಳಿಕ ಸುಮಾರು 89ವರ್ಷಗಳ ನಂತರ 2022ರಲ್ಲಿ ಎರಡನೇ ಬಾರಿಗೆ ಜಲಾಶಯ ಕೋಡಿ ಬಿದ್ದು ಇತಿಹಾಸ ನಿರ್ಮಾಣವಾಗಿತ್ತು. ಇನ್ನು ಈ ಜಲಾಶಯದಿಂದ ಹಿರಿಯೂರು ನಗರ, ಐಮಂಗಲ, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.












Click it and Unblock the Notifications