Vani Vilasa Sagar: ಹಿರಿಯೂರು ತಾಲೂಕಿನ ಎಲ್ಲಾ ಗ್ರಾಮಗಳಿಗೂ ಜಲಾಶಯದಿಂದ ನೀರಿನ ಸಂಪರ್ಕ-ಯಾವಾಗ?
ಹಿರಿಯೂರು, ಫೆಬ್ರವರಿ, 18: ಮುಂಬರುವ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ವಾಣಿ ವಿಲಾಸ ಸಾಗರ ಜಲಾಶಯದಿಂದ ನೀರಿನ ಸಂಪರ್ಕ ಕಲ್ಪಿಸಲಾಗುವುದು, ಉತ್ತಮ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಯೋಜನ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಗ್ರಾಮದ ಬೋರಪ್ಪ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಪಂಚಗ್ಯಾರೆಂಟಿ ಅನುಷ್ಠಾನ ಸಮಾವೇಶ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಮಂಗಲ ಹೋಬಳಿಯಲ್ಲಿ ಉತ್ತಮ ಕುಡಿಯುವ ನೀರಿಲ್ಲ, 1000 ಅಡಿಗಳ ವರೆಗೂ ಕೊಳವೆ ಬಾವಿ ಹಾಕಿಸಬೇಕು ಎಂದರು.

ಬೋರ್‌ವೆಲ್‌ಗಳಲ್ಲಿ ದೊರೆಯುವ ನೀರಿನಲ್ಲಿ ಅತಿ ಹೆಚ್ಚು ಫ್ಲೋರೈಡ್ ಅಂಶ ಇದ್ದು, ಇದು ಕುಡಿಯಲು ಯೋಗ್ಯವಲ್ಲ. ಇಲ್ಲಿ ಸಿಗುವ ನೀರನ್ನು ಶುದ್ಧಿಕರಿಸದೇ ಹಾಗೇ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಆದ್ದರಿಂದ ವಾಣಿ ವಿಲಾಸ ಸಾಗರದಿಂದ ಶಾಶ್ವತ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂದು ಈ ಭಾಗದ ಜನರ ಬಹುದಿನಗಳ ಬೇಡಿಕೆ ಇಟ್ಟಿದ್ದರು.
ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಯಿಂದ ಇಷ್ಟು ಹೊತ್ತಿಗೆ ಈ ಭಾಗದ ಜನರಿಗೆ ನೀರು ಸಿಗಬೇಕಿತ್ತು. ಆದರೆ ನಂತರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಕಾರಣ ಯೋಜನೆ ನೆಲಗುದಿಗೆ ಬಿದಿತ್ತು. ಹಿಂದಿನ ಸರ್ಕಾರದವರು ಈ ಕೆಲಸ ಪೂರ್ಣ ಮಾಡಬಹುದಿತ್ತು. ಆದರೆ ಅವರಿಗೆ ಯಾವುದೇ ಅಭಿವೃದ್ಧಿ ಮಾಡುವ ಉತ್ಸಾಹ ಇರದ ಕಾರಣ ಹಾಗೇಯೇ ತಳ್ಳಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಾನು ಶಾಸಕನಾಗಿ ಆರಂಭ ಮಾಡಿ ಯೋಜನೆಯನ್ನು ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ವೇಳೆ ಉದ್ಘಾಟನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ಇನ್ನು ಈ ಬಾರಿ ಹೆಚ್ಚಿನ ಬರಗಾಲ ಇದ್ದು, ನೀರಿನ ಸಮಸ್ಯೆ ಉಂಟಾದಲ್ಲಿ ಅಗತ್ಯ ಕ್ರಮ ಕೈಗೊಂಡು ಕೊಳವೆಬಾವಿ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಅದು ಕಡಿಮೆ ಬಂದರೆ ಟ್ಯಾಂಕರ್‍ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಬಿಜೆಪಿ ಪಕ್ಷದವರಿಗೆ ಯಾವುದೇ ಜನಪರ ಅಭಿವೃದ್ಧಿಯ ಕಾಳಜಿ ಇಲ್ಲ. ಜಾನಕಿ ರಾಮನ ಫೋಟೋ ತೋರಿಸಿ ಧಾರ್ಮಿಕ ಭಾವನೆಯಲ್ಲಿ ಕಟ್ಟಿ ಹಾಕುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಅದಕ್ಕೆ ಕಿವಿಕೊಡಬೇಡಿ. ನಮ್ಮ ಸರ್ಕಾರ ಜನ ಪರವಾಗಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ವಿಕ್ಷಗಳು ಅಪಪ್ರಚಾರ ಮಾಡಿದ್ದವು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಹಂತ ಹಂತವಾಗಿ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ನಾವು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಗುರಿ ಹೊಂದಿದ್ದೇವೆ. ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ಯಾವುದೇ ಭಾಗಕ್ಕೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಗೃಹಜ್ಯೋತಿಯಿಂದ ಉಚಿತ ವಿದ್ಯುತ್ ಸೌಲಭ್ಯ, ಗೃಹಲಕ್ಷ್ಮೀ ಯೋಜನೆಯಿಂದ ಮನೆಯ ಯಜಮಾನಿಗೆ 2,000 ಹಣ, ಅನ್ನ ಭಾಗ್ಯದಿಂದ 5 ಕೆ.ಜಿ. ಅಕ್ಕಿ ಮತ್ತು 170 ರೂಪಾಯಿ ಹಣ, ಯುವನಿಧಿಯಿಂದ ಪದವೀಧರ ನಿರುದ್ಯೋಗಿಗಳಿಗೆ 3,000 ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಪರ ಕಾಳಜಿಯ ಕೆಲಸಗಳನ್ನು ಕಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಟೀಕಿಸುವುದರಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಬಿಜೆಪಿ ಪಕ್ಷವನ್ನು ಕಿತ್ತೊಗೆಯೋಣ. ಇನ್ನು ಹೆಚ್ಚು ಜನೋಪಯೋಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮುಂಬರುವ ಚುನಾವಣೆಯಲ್ಲಿ ಜನರ ಆಶೀರ್ವಾದ ಅಗತ್ಯ ಎಂದರು.
ಕಲ್ಲಹಟ್ಟಿ ಸಿ.ತಿಪ್ಪೇಸ್ವಾಮಿ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಭಗೀರಥ ಪ್ರಯತ್ನದ ಮೂಲಕ ಮಾನ್ಯ ಸಚಿವರು ನಮಗೆ ಕಲ್ಪಿಸಿದ್ದಾರೆ. ಅವರ ಈ ಕೆಲಸವನ್ನು ಈ ಭಾಗದ ಜನರು ಮರೆಯುವುದಿಲ್ಲ, ಕಾಂಗ್ರೇಸ್ ಸರ್ಕಾರ ನೀಡಿದ್ದ ಭರವಸೆಗಳನ್ನು ಎಂಟೊಂಬತ್ತು ತಿಂಗಳಲ್ಲಿ ಅನುಷ್ಠಾನಗೊಳಿಸಿ ಕೊಟ್ಟ ಮಾತಿನಂತೆ ನಡೆದಿದೆ ಎಂದರು.
ಐಮಂಗಲದ ರಜೀಯಾಬೇಗಂ, ಸೊಂಡೆಕೆರೆ ಮಲ್ಲಮ್ಮ, ಪಾಲವ್ವನಹಳ್ಳಿ ಶಾರದಮ್ಮ ಮತ್ತು ನಾಗವೇಣಿ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡದರು.
ಈ ವೇಳೆ ತಹಶೀಲ್ದಾರ್ ರಾಜೇಶ್‍ಕುಮಾರ್, ಡಿಹೆಚ್‍ಓ ರೇಣುಪ್ರಸಾದ್, ಟಿಹೆಚ್‍ಓ ವೆಂಕಟೇಶ್, ಎಇಇ ಬಸವನಗೌಡಪಾಟೀಲ್, ಎಇ ಹಸನ್‍ಭಾಷಾ, ಪಶು ಇಲಾಖೆಯ ಡಾ.ಹುಸೇನ್, ಐಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಎಸ್.ಎನ್.ಮೂರ್ಕಣಪ್ಪ, ವೈದ್ಯ ಡಾ.ರವಿಕುಮಾರ್, ಗೌನಹಳ್ಳಿ ಮಹಾಂತೇಶ್, ಮುಖಂಡರಾದ ಸಿ.ಪ್ರವೀಣ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹರ್ತಿಕೋಟೆ ಮಹಾಂತೇಶ್, ಗೌನಹಳ್ಳಿ ಮಹಾಂತೇಶ್, ಕೋವೇರಹಟ್ಟಿ ಎನ್.ಉಮಾಪತಿ, ಈರಲಿಂಗೇಗೌಡ, ಖಾದಿರಮೇಶ್, ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓಗಳು, ಸದಸ್ಯರು, ಕಾರ್ಯಕರ್ತರು ಮತ್ತು ಹೋಬಳಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.












Click it and Unblock the Notifications