ತುಮಕೂರು- ಚಿತ್ರದುರ್ಗ ರೈಲ್ವೆ ಕಾಮಗಾರಿ ಮಾರ್ಚ್‌ನಲ್ಲಿ ಆರಂಭ
ಚಿತ್ರದುರ್ಗ, ಜನವರಿ 8: ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲು ಗುರಿ ಹೊಂದಲಾಗಿದ್ದು, ಭೂಸ್ವಾಧೀನವಾದ ಎಲ್ಲ ರೈತರಿಗೆ ಫೆಬ್ರವರಿ 15ರೊಳಗೆ ಪರಿಹಾರ ಹಣ ಪಾವತಿಸಲು ಭೂಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸೂಚಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವೇ ಮಾಡಲಾದ ರೈಲ್ವೆ ಮಾರ್ಗದಲ್ಲಿ ಗುರಿತಿಸಲಾದ ಕಲ್ಲುಗಳನ್ನು ಕಿತ್ತು ಹಾಕಲಾಗಿದೆ. ಇದನ್ನು ಮುಂದಿನ ವಾರದಲ್ಲಿ ಸರ್ವೇ ಅಧಿಕಾರಿಗಳು, ರೈಲ್ವೆ ಇಂಜಿನಿಯರ್‌ಗಳು ಸೇರಿಕೊಂಡು ಬಾಂದ್‍ಗಲ್ಲುಗಳನ್ನು ಪುನರ್ ಸ್ಥಾಪಿಸಬೇಕು ಎಂದು ಸರ್ವೇ ಹಾಗೂ ರೈಲ್ವೆ ಇಂಜಿನಿಯರ್‌ಗಳಿಗೆ ಸಚಿವರು ಸೂಚಿಸಿದ್ದಾರೆ.

ಮೂರನೇ ಅಲೆ ಎದುರಿಸಲು ಕ್ರಮವಹಿಸಿ
ಕೋವಿಡ್-19ರ ಹೊಸ ರೂಪಾಂತರವಾದ ಓಮಿಕ್ರಾನ್‍ನೊಂದಿಗೆ ಕೋವಿಡ್ ವೈರಸ್‌ನ ಮೂರನೇ ಅಲೆ ಎದುರಿಸಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಮ್ಲಜನಕ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಹೇಳಿದರು.
ಇದೇ ಜನವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಹಾಸಿಗೆ ವ್ಯವಸ್ಥೆ, ಔಷಧಿ, ತಜ್ಞ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು. ಕೋವಿಡ್-19ರ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಲಕ್ಷಣಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಶಿಕ್ಷಣ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಕೆ. ಶ್ರೀನಿವಾಸ್ ಮಾತನಾಡಿ, ಕೋವಿಡ್-19ರ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಾಗಿದೆ. ಪ್ರಸ್ತುತ ಕೋವಿಡ್- 19ರ ಮೂರನೇ ಅಲೆಯು ಪ್ರಾರಂಭವಾಗಿದ್ದು, ಕೋವಿಡ್-19ರ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ವೈದ್ಯರು, ಸಿಬ್ಬಂದಿ, ಹಾಸಿಗೆ ವ್ಯವಸ್ಥೆ, ಆಕ್ಸಿಜನ್ ಕೊರತೆ ಆಗದಂತೆ ಕ್ರಮವಹಿಸಬೇಕು. ಮುಖ್ಯವಾಗಿ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದರು.
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಬಂದವು. ಆದರೆ ಈ ಬಾರಿ ಮೂರನೇ ಅಲೆಯ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆಗಳು ಆಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
Recommended Video

ಕೋವಿಡ್‍ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಕೋವಿಡ್ ಪರಿಹಾರ ಮೊತ್ತವನ್ನು ಕೂಡಲೇ ವಿತರಿಸಬೇಕು. ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಸೇರಿದಂತೆ ಒಟ್ಟು 1.50 ಲಕ್ಷ ರೂ. ಕೋವಿಡ್ ಪರಿಹಾರ ನೀಡಲಾಗುತ್ತಿದೆ ಎನ್ನಲಾಗಿದೆ.
ಆದರೆ ಕೇಂದ್ರ ಸರ್ಕಾರದಿಂದ ಬರುವ ಕೋವಿಡ್ ಪರಿಹಾರ ಇನ್ನೂ ಬಂದಿಲ್ಲ ಎಂಬ ಮಾಹಿತಿ ಇದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯೂರು ತಹಶೀಲ್ದಾರ್ ಶಿವಕುಮಾರ್, ರಾಜ್ಯ ಸರ್ಕಾರದಿಂದ ನೀಡುವ ಕೋವಿಡ್ ಪರಿಹಾರ ಈಗಾಗಲೇ ಫಲಾನುಭವಿಗಳಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಇನ್ನೂ ಪರಿಹಾರ ನೀಡಿಲ್ಲ ಎಂದರು.
ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ರಂಗನಾಥ್ ಮಾತನಾಡಿ, ಕೋವಿಡ್-19ರ ಮೂರನೇ ಅಲೆಗೆ ಸಿದ್ಧತೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹೊಳಲ್ಕೆರೆ ತಾಲ್ಲೂಕು ಹೊರತುಪಡಿಸಿ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಘಟಕ ಸಿದ್ಧವಿದೆ. ಹೊಳಲ್ಕೆರೆ ತಾಲ್ಲೂಕು ಆಕ್ಸಿಜನ್ ಘಟಕ ಇನ್ನು ಹತ್ತು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನಂದೀನಿ ದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications