ನಾಳೆ ಕೋಟೆನಾಡಿನಲ್ಲಿ ಪ್ರಧಾನಿ ಮೋದಿ: ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ
ಚಿತ್ರದುರ್ಗ, ಮೇ 1: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮತ ಪ್ರಚಾರದ ಬೃಹತ್ ಸಮಾವೇಶ ಕಾರ್ಯಕ್ರಮ ನಾಳೆ( ಮೇ2) ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋಟೆ ನಾಡಿಗೆ ಭೇಟಿ ನೀಡಲಿದ್ದಾರೆ.
ನಾಳೆ ಬೆಳಗ್ಗೆ ಸುಮಾರು 10.30 ಗಂಟೆಗೆ ಪ್ರಧಾನಿ ಮೋದಿ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು ಎರಡೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದಲ್ಲದೆ ರಾಜ್ಯ ನಾಯಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಈಗಾಗಲೇ ಬೃಹತ್ ಪೆಂಡಾಲ್ ಹಾಕಲಾಗಿದೆ. ಹೊಸದುರ್ಗ, ಮೊಳಕಾಲ್ಮೂರು, ಚಿತ್ರದುರ್ಗ,ಹಿರಿಯೂರು ಹೊಳಲ್ಕರೆ, ಚಳ್ಳಕೆರೆ, ಮತ್ತು ದಾವಣಗೆರೆ, ಚನ್ನಗಿರಿ, ಜಗಳೂರು, ಮಾಯಕೊಂಡ, ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೊದಲು ನಗರದ ಒನಕೆ ಓಬವ್ವ ಸ್ಟೇಡಿಯಂಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಅಲ್ಲಿಂದ ಓಕಾರ್ ಮೂಲಕ ಜಯದೇವ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕೋಟೆನಾಡಿನ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸಲು ಜಿಲ್ಲಾ ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿದ್ದು, ಪ್ರಧಾನಿ ಮೋದಿಯವರಿಗೆ ಮ್ಯಾಸ ಬೇಡರ ಧಿರಿಸಿನ ಮಾದರಿ ಸನ್ಮಾನ ಮಾಡಲು ಯೋಜನೆ ರೂಪಿಸಿದ್ದಾರೆ. ಹಾಗೇ ತಮಟೆ ಬಾರಿಸಿ ಸಮಾವೇಶ ಉದ್ಘಾಟನೆಗೆ ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗುತ್ತದೆ. ಪ್ರಧಾನಿ ಮೋದಿಯವರಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹವನ್ನು ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಿಮಾನದ ಮೂಲಕ ಚಳ್ಳಕೆರೆ ತಾಲೂಕಿನ ಕುದಾಪುರದ ಬಳಿ ಇರುವ ಡಿಆರ್‌ಡಿಓಗೆ ಆಗಮಿಸುವ ಪ್ರಧಾನಿಯವರು, ನಂತರ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ನಗರದ ಓನಕೆ ಓಬವ್ವ ಕ್ರೀಡಾಂಗಣಕ್ಕೆ ಆಗಮಿಸಿ, ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸುವ ಹಾಗೂ ಹೊರ ಹೋಗುವ ವಾಹನಗಳ ರಸ್ತೆ ಮಾರ್ಗಗಳನ್ನು ಬದಲಾಣೆ ಮಾಡಲಾಗಿದೆ.
ಸಮಾರಂಭಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಚಿತ್ರದುರ್ಗಕ್ಕೆ ಬೆಂಗಳೂರು, ಕಡೆಯಿಂದ ಬರುವ ವಾಹನಗಳು ಕ್ಯಾದಿಗೆರೆಯಿಂದ ಹೊಸ ಬೈಪಾಸ್ ಮೂಲಕ ಸಂಚರಿಸಿ, ಎನ್.ಹೆಚ್.50 ಪಿಳ್ಳೆ ಕೇರನಹಳ್ಳಿ ಮೂಲಕ ಚಿತ್ರದುರ್ಗ ನಗರ ಪ್ರವೇಶಿಸುವುದು. ದಾವಣಗೆರೆ ಕಡೆಯಿಂದ ಬರುವ ವಾಹನಗಳು ಜೆ.ಎಂ.ಐ.ಟಿ. ಸರ್ಕಲ್ ಮೂಲಕ ನಗರ ಪ್ರವೇಶಿಸುವುದು. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ ಕಡೆಗೆ ಚಲಿಸುವ ಕೆ.ಎಸ್.ಆರ್.ಟಿ.ಸಿ, ಮತ್ತು ಇತರ ವಾಹನಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಜಿ.ಎಂ.ಐ.ಟಿ, ಸರ್ಕಲ್ ಮೂಲಕ ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ರಸ್ತೆ ಸೇರುವುದು.
ಶಿವಮೊಗ್ಗ, ದಾವಣಗೆರೆ ಚಳ್ಳಕೆರೆ, ಬೆಂಗಳೂರು, ಹೊಸಪೇಟೆ ಕಡೆಗೆ ಚಲಿಸುವ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಎ.ಪಿ.ಎಂ.ಸಿ. ಮೆದೇಹಳ್ಳಿ ರಸ್ತೆ ಮೂಲಕ ಹಾಯ್ದು ಸೀಬಾರ ಕ್ರಾಸ್ ಅಥವಾ ಎನ್.ಹೆಚ್.50 ಮೂಲಕ ಹೊಸ ಬೈಪಾಸ್ ಸೇರುವುದು. ನಗರದ ಚಳ್ಳಕೆರೆ ಕ್ರಾಸ್‌ನಿಂದ ಮದಕರಿ ವೃತ್ತದವರೆಗಿನ ರಸ್ತೆಯಲ್ಲಿ ವಿ.ಐ.ಪಿ, ಪಾಸ್ ಹೊಂದಿದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇನ್ನು ವಾಹನ ನಿಲುಗಡೆ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications