ಚಿತ್ರದುರ್ಗದಲ್ಲಿ ಹೊಸ ರೈಲು ಮಾರ್ಗ ನಿರ್ಮಿಸಲಿದೆ ನೈಋತ್ಯ ರೈಲ್ವೆ
ಚಿತ್ರದುರ್ಗ, ಆಗಸ್ಟ್ 28; ನೈಋತ್ಯ ರೈಲ್ವೆ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭಾಗವಾಗಿ ಹೊಸ ರೈಲು ಮಾರ್ಗವನ್ನು ನಿರ್ಮಾಣ ಮಾಡಲಿದೆ. 28 ಕಿ. ಮೀ. ಉದ್ದದ ಬ್ರಾಡ್ ಗೇಜ್ ಮಾರ್ಗ ಇದಾಗಿದೆ.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭಾಗವಾಗಿ ಚಿತ್ರದುರ್ಗ-ಭರಮಸಾಗರ ಸಂಪರ್ಕಿಸುವ ಹೊಸ ರೈಲು ಮಾರ್ಗವನ್ನು ನೈಋತ್ಯ ರೈಲ್ವೆ ನಿರ್ಮಾಣ ಮಾಡಲಿದೆ. ಇದಕ್ಕಾಗಿ ಈಗಾಗಲೇ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.

ರೈಲುಗಳು ಗಂಟೆಗೆ 130 ಕಿ. ಮೀ. ವೇಗದಲ್ಲಿ, 25 ಟನ್ ಸರಕು ಹೊತ್ತು ಸಾಗುವಂತೆ ಒಂದು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ. ಈ ಬ್ರಾಡ್ ಗೇಜ್ ಮಾರ್ಗದ ಉದ್ದ ಸುಮಾರು 28 ಕಿ. ಮೀ.ಗಳು ಎಂದು ಅಂದಾಜಿಸಲಾಗಿದೆ.
ಹೊಸ ರೈಲು ಮಾರ್ಗದ ವಿವರಗಳು; ನೈಋತ್ಯ ರೈಲ್ವೆ ಚಿತ್ರದುರ್ಗ-ಭರಮಸಾಗರ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭಿಸಿದೆ. 28.720 ಕಿ. ಮೀ. ಉದ್ದದ ಈ ಮಾರ್ಗ ನಿರ್ಮಾಣಕ್ಕೆ ಸುಮಾರು 380.14 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದ ಬಹು ನಿರೀಕ್ಷಿತ ರೈಲು ಯೋಜನೆಗಳಲ್ಲಿ ಒಂದಾಗಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಭಾಗವಾಗಿ ಚಿತ್ರದುರ್ಗ-ಭರಮಸಾಗರ ರೈಲು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 24 ತಿಂಗಳಿನಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಶೀಘ್ರವೇ ಈ ಯೋಜನೆಗೆ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಪಡೆಯುವವರು ಸಿವಿಲ್ ಕಾಮಗಾರಿಗಳು, ಎಲೆಕ್ಟ್ರಿಕಲ್ ಕಾಮಗಾರಿ, ಸಿಗ್ನಲಿಂಗ್, ಮಾರ್ಗದ ನಿರ್ಮಾಣ ಹೀಗೆ ಎಲ್ಲಾ ಕೆಲಸಗಳನ್ನು ವಹಿಸಿಕೊಳ್ಳಬೇಕಿದೆ. ಈ ಮಾರ್ಗದಲ್ಲಿ5 ಪ್ರಮಖ ಸೇತುವೆಗಳ ನಿರ್ಮಾಣವಾಗಲಿದೆ.
18 ಚಿಕ್ಕ ಸೇತುವೆಗಳು, 23 ರಸ್ತೆ ಕೆಳ ಸೇತುವೆಗಳು, 7 ರಸ್ತೆ ಮೇಲ್ಸೇತುವೆಗಳು, 1 ಪಾದಚಾರಿ ಸೇತುವೆ ಈ ಮಾರ್ಗದಲ್ಲಿ ನಿರ್ಮಾಣವಾಗಲಿದೆ ಎಂದು ಯೋಜನಾ ವರದಿ ಹೇಳಿದೆ. ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಸಂಚಾರ ನಡೆಸುವಂತೆ ಈ ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ.
ಭರಮಸಾಗರ ರೈಲು ನಿಲ್ದಾಣದಲ್ಲಿ 2 ಪ್ಲಾಟ್ ಫಾರಂಗಳು ನಿರ್ಮಾಣವಾಗಲಿವೆ. 1 ಪಾದಚಾರಿ ಸೇತುವೆ ನಿರ್ಮಿಸಲಾಗುತ್ತದೆ. ಈ ಮಾರ್ಗದಲ್ಲಿ ಸಿರಿಗೆರೆ ಹಾಲ್ಟ್ ಸ್ಟೇಷನ್ ನಿರ್ಮಿಸಲಾಗುತ್ತದೆ. ಇಲ್ಲಿಯೂ ಸಹ ಒಂದು ಪ್ಲಾಟ್ ಫಾರಂ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಲಕ್ಷ್ಮೀ ಸಾಗರ ರೈಲ್ವೆ ನಿಲ್ದಾಣ ಸಹ ನಿರ್ಮಾಣಗೊಳ್ಳಲಿದೆ.
ಉತ್ತರ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ಸಂಚಾರದ ಅವಧಿ ಕಡಿಮೆ ಮಾಡುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಕರ್ನಾಟಕದ ಪ್ರಮುಖ ರೈಲು ಯೋಜನೆಗಳಲ್ಲಿ ಒಂದು. ಈ ಯೋಜನೆಗಾಗಿ ಈಗಾಗಲೇ ರೈಲ್ವೆ ಇಲಾಖೆ ಭೂ ಸ್ವಾಧೀನ ಕಾರ್ಯವನ್ನು ಆರಂಭಿಸಿದೆ.
ಈ ನೇರ ರೈಲು ಮಾರ್ಗ ನಿರ್ಮಾಣವಾದರೆ ಬೆಂಗಳೂರು-ದಾವಣಗೆರೆ ನಡುವೆ ಸಂಚಾರ ನಡೆಸುವವರಿಗೆ ಸಹಕಾರಿಯಾಗಲಿದೆ. ಅಲ್ಲದೇ ಶಿವಮೊಗ್ಗ ರೈಲು ಮಾರ್ಗದ ಮೇಲಿರುವ ಒತ್ತಡವೂ ಸಹ ಕಡಿಮೆಯಾಗಲಿದೆ. ಆದರೆ ಈ ಯೋಜನೆ ಘೋಷಣೆಯಾದ ಬಳಿಕ ಕುಂಟುತ್ತಲೇ ಸಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನೇರ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಕೇಂದ್ರದ ಬಜೆಟ್‌ಗೆ ಸೇರಿದ್ದು, 2011-12ರಲ್ಲಿ. ಆಗ ಸುಮಾರು 3015 ಎಕರೆ ಭೂಮಿ ಈ ಯೋಜನೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಮಾರ್ಗಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ.
ಈ ಯೋಜನೆಯ ವರದಿಯಂತೆ ಒಟ್ಟು 19 ನಿಲ್ದಾಣಗಳನ್ನು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಉರಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಚಿತ್ರದುರ್ಗ ಜಿಲ್ಲೆಯ ಆನೆಸಿದ್ರಿ, ಹಿರಿಯೂರು, ಮೇಟಿಕುರ್ಕೆ, ಐಮಂಗಳ, ಪಾಲವ್ವನಹಳ್ಳಿ, ದೊಡ್ಡಸಿದ್ದವ್ವನಹಳ್ಳಿ, ಚಿತ್ರದುರ್ಗ, ಸಿರಿಗೆರೆ ಕ್ರಾಸ್, ಭರಮಸಾಗರ ಮತ್ತು ದಾವಣಗೆರೆ ಜಿಲ್ಲೆಯ ಹೆಬ್ಬಾಳು, ಆನಗೋಡು, ತೋಳಹುಣಸೆ ನಿಲ್ದಾಣಗಳು ಯೋಜನೆಯಲ್ಲಿ ಸೇರಿವೆ.












Click it and Unblock the Notifications