ಪ್ರಿಯತಮೆಯ ಮಗನಿಗೆ ಬರೆ ಹಾಕಿದ ಆರೋಪಿ, ಬಂಧನ ಭೀತಿಯಿಂದ ಆತ್ಮಹತ್ಯೆಗೆ ಯತ್ನ
ಚಿತ್ರದುರ್ಗ, ನವೆಂಬರ್ 12: ತನ್ನ ಪ್ರಿಯತಮೆಯ ಮಗನಿಗೆ ಬರೆ ಹಾಕಿದ್ದ ಆರೋಪಿಯು, ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಶಿವಮೂರ್ತಿ (30) ಎಂಬಾತನೇ ಬಂಧನ ಭೀತಿಯಿಂದ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿ ಆತ್ಮಹತ್ಯೆ ಯತ್ನಿಸಿದವನು ಎಂದು ತಿಳಿದು ಬಂದಿದೆ.
ನಿಂಗಮ್ಮ (ಶೃತಿ) ಎಂಬಾಕೆ ಜಯಪ್ಪನೊಂದಿಗೆ ಮದುವೆಯಾಗಿ ಏಳು ವರ್ಷ ಕಳೆದಿದ್ದು, ಇಬ್ಬರು ದಂಪತಿಗಳಿಗೆ ಒಂದು ಮುದ್ದಾದ ಗಂಡು ಮಗು ಕೂಡ ಇತ್ತು. ಆದರೆ ನಿಂಗಮ್ಮ (ಶೃತಿ), ಯುವಕ ಶಿವಮೂರ್ತಿಯ ಪ್ರೀತಿಯ ಬಲೆಗೆ ಬಿದ್ದಿದ್ದಳು.

ಮೂಲತಃ ನಿಂಗಮ್ಮ (ಶೃತಿ) ಹೊಳಲ್ಕೆರೆ ತಾಲೂಕಿನ ತಾಳ್ಯಾ ಗ್ರಾಮದವಳು. ಇತ್ತೀಚೆಗೆ ಘಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿಯೊಂದಿಗೆ ಬೆಳೆದ ಸಲಿಗೆ, ಪ್ರೀತಿಯಾಗಿ ಆಕೆ ಮನೆ ಮತ್ತು ಗಂಡನನ್ನೇ ಬಿಟ್ಟು ಬಂದು ಆರು ವರ್ಷದ ಮಗುವಿನೊಂದಿಗೆ ಬಂದು ಶೃತಿ ಕೆಲ ದಿನಗಳಿಂದ ಗಟ್ಟಿ ಹೊಸಹಳ್ಳಿಯಲ್ಲಿ ಪ್ರಿಯಕರ ಶಿವಮೂರ್ತಿ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.
ಏನೂ ಅರಿಯದ ಮುಗ್ಧ ಮಗುವಿಗೆ ನೀನು ನನ್ನನ್ನು ಅಪ್ಪ ಎಂದು ಕರೆಯಬೇಕು ಎಂದು ಹೇಳಿ ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಶಿವಮೂರ್ತಿ ಚಿತ್ರಹಿಂಸೆ ನೀಡಿದ್ದ. ಮಗುವಿನ ಕಾಲು ಹಾಗೂ ಕೈ ಮೇಲೆ ಬೆಂಕಿಯಿಂದ ಬರೆ ಹಾಕಿದ್ದನು. ಇದನ್ನು ಬಿಡಿಸಿಕೊಳ್ಳಲು ಅಡ್ಡ ಬಂದ ಪ್ರಿಯತಮೆ ಶೃತಿಗೂ ಸುಟ್ಟ ಗಾಯಗಳಾಗಿವೆ.

ಇಷ್ಟೇ ಅಲ್ಲದೆ ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಆರೋಪಿಯು ಮಗುವಿನ ಮೇಲೆ ಹಲ್ಲೆ ಮಾಡಿದ್ದನು. ಗಾಯಗಳಿಂದ ನರಳಾಡುತ್ತಿದ್ದ ಬಾಲಕನನ್ನು ಗಮನಿಸಿದ ಗ್ರಾಮಸ್ಥರು ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಾಲಕನು ತನಗಾಗುತ್ತಿರುವ ಚಿತ್ರಹಿಂಸೆ ಬಗ್ಗೆ ಪೊಲೀಸರ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದ. ಆರೋಪಿ ಶಿವಮೂರ್ತಿ ವಿರುದ್ಧ ಚಿತ್ರಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದಂತೆ ಮಾಹಿತಿ ತಿಳಿದು ಆತಂಕಗೊಂಡಿದ್ದ ಆರೋಪಿ ಶಿವಮೂರ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.












Click it and Unblock the Notifications