ಸಿರಿಗೆರೆ ತರಳಬಾಳು ಮಠದ ಪ್ರೀತಿಯ 'ಗೌರಿ' ಇನ್ನು ನೆನಪು ಮಾತ್ರ
ಚಿತ್ರದುರ್ಗ, ನ 13 : ಜಿಲ್ಲೆಯ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ, ಶಿವಮೂರ್ತಿ ಸ್ವಾಮೀಜಿ ಅವರ ಆಶ್ರಯದಲ್ಲಿ ಬೆಳದು ಮತ್ತು ಮಠದ ಎಲ್ಲ ಮಕ್ಕಳಿಗೂ ಪ್ರಿಯವಾಗಿ ಬೆಳೆದ ಆನೆ ಇನ್ನು ಮುಂದೆ ನೆನಪು ಮಾತ್ರ.
ಚಿತ್ರದುರ್ಗದ ಸುತ್ತ ಮುತ್ತ ಹಳ್ಳಿ ಹಳ್ಳಿಗಳಲ್ಲಿ ಮಕ್ಕಳಿಗೆ ಆನೆ ಎಂದರೆ ಅದು ಸಿರಿಗೆರೆ ಮಠದ ಆನೆ. ಎಲ್ಲರ ಪ್ರೀತಿಯ ಈ ಆನೆ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದೆ, ಕಳೆದ ಭಾನುವಾರ (ನ 8) ಆಸುಪಾಸಿನ ಜನತೆ ಭಾರವಾದ ಹೃದಯದಿಂದ ಆನೆಯನ್ನು ಮಣ್ಣು ಮಾಡುವ ಸಮಯದಲ್ಲಿ ಪಾಲ್ಗೊಂಡಿದ್ದರು.
ಟಿ ಎಸ್ ನಾಗಾಭರಣ ನಿರ್ದೇಶನದ, ಭಾವೈಕ್ಯತೆಯ ಸಂದೇಶವುಳ್ಳ "ಕಲ್ಲರಳಿ ಹೂವಾಗಿ" ಚಿತ್ರದಲ್ಲಿ ಈ ಆನೆಯೂ ಒಂದು ಪಾತ್ರವನ್ನು ಮಾಡಿತ್ತು. ಚಿತ್ರತಂಡದ ಸದಸ್ಯರು ಈ ಆನೆಗೆ 'ಗೌರಿ' ಎಂದು ನಾಮಕರಣ ಮಾಡಿದ್ದರು. ಅಂದಿನಿಂದ ಈ ಆನೆ ಗೌರಿ ಎಂದೇ ಹೆಸರಾಯಿತು.
ರಾಜ್ಯ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕಂಕಪ್ಪ ಮತ್ತು ಅವರ ಕುಟುಂಬದವರು 2002 ರಲ್ಲಿ ಶ್ರೀಮಠಕ್ಕೆ 11 ವರ್ಷ ಪ್ರಾಯದ ಗೌರಿಯನ್ನು ಭಕ್ತಿ ಕಾಣಿಕೆಯಾಗಿ ನೀಡಿದ್ದರು.
ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯಲ್ಲಿ ನವಂಬರ್ 1 ರಿಂದು ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲೂ ಗೌರಿ ಭಾಗಿಯಾಗಿದ್ದಳು. ಮಠದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೌರಿ ತನ್ನ ಸೇವೆ ಸಲ್ಲಿಸುತ್ತಿದ್ದಳು.
ಅಬಾಲವೃದ್ಧರಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದ ಗೌರಿಯ ಸಾವು ಸಹಸ್ರಾರು ಭಕ್ತಾದಿಗಳ ಕಣ್ಣಂಚನ್ನು ಒದ್ದೆ ಮಾಡಿದೆ.
ಜನಸಾಮಾನ್ಯರ ಜೊತೆಗೆ ಹೊಂದಿಕೊಂಡಿದ್ದ ಗೌರಿಯ ಸಾವಿಗೆ ತರಳಬಾಳು ಸ್ವಾಮೀಜಿ, ಹೊಸದುರ್ಗದ ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್ ಬಿ ರಂಗನಾಥ್ ಹಾಗೂ ಮಠದ ಅಪಾರ ಭಕ್ತಾದಿಗಳು, ವಿದ್ಯಾಸಂಸ್ಥೆಯ ಸಹಸ್ರಾರು ನೌಕರರು, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ. (Image : File Photo)