ಮೊಳಕಾಲ್ಮೂರು; ಕಣಕುಪ್ಪೆಯಲ್ಲಿ ಗೊರವರ ನೃತ್ಯಕ್ಕೆ ಹೆಜ್ಜೆ ಹಾಕಿದ ಸಿದ್ದರಾಮಯ್ಯ
ಚಿತ್ರದುರ್ಗ, ಅಕ್ಟೋಬರ್, 13: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿರುವ ಪಕ್ಷದ ಮುಖಂಡ ಕುಮಾರ ಗೌಡ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಗೊರವರ ನೃತ್ಯದ ಮೂಲಕ ಸ್ಥಳೀಯರು ಸ್ವಾಗತ ಕೋರಿದರು. ನೃತ್ಯಕ್ಕೆ ಮನಸೋತ ಸಿದ್ದರಾಮಯ್ಯ ತಾವೂ ಕೂಡ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.
ಇನ್ನು ಸಿದ್ದರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಗೊರವರ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಅಲ್ಲಿನ ಸ್ಥಳೀಯರು ಸಾಥ್ ನೀಡಿದ್ದು, ನೃತ್ಯವನ್ನು ಯಾವ ರೀತಿಯಾಗಿ ಮಾಡಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಕೈಯಲ್ಲಿ ಡಮರುಗ ಹಿಡಿದು ಹೆಜ್ಜೆ ಹಾಕುತ್ತಾ ಸಿದ್ದರಾಮಯ್ಯನವರು ಗಮನ ಸೆಳೆದರು.
ಬಳ್ಳಾರಿಯಲ್ಲಿ ಬಹಿರಂಗ ಸಭೆಗೆ ಸಕಲ ಸಿದ್ಧತೆ:
ಬಳ್ಳಾರಿ ಜಿಲ್ಲೆಯಲ್ಲಿ ನಾಳೆಯಿಂದ 16 ರವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಯಲಿದ್ದು, ಈಗಾಗಲೇ ಸಕಲ ಸಿದ್ದತೆ ನಡೆಸಲಾಗಿದೆ. ಭದ್ರತೆ ದೃಷ್ಟಿಯಿಂದ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಜಿಲ್ಲೆಯಲ್ಲಿ ನಡೆಯಲಿರುವ ಭಾರತ್ ಜೋಡೋ ಪಾದಯಾತ್ರೆ ಮಾರ್ಗ ಮತ್ತು ಬಹಿರಂಗ ಸಭೆ ನಡೆಯುವ ಸ್ಥಳಗಳಲ್ಲಿ ಡ್ರೋನ್ ಹಾರಾಟ ನಡೆಸದಂತೆ ತಾತ್ಕಾಲಿಕ ಕೆಂಪು ವಲಯ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಬಳ್ಳಾರಿ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ ಮಾಡಲಿದೆ. ಅದಕ್ಕಾಗಿ ಅಕ್ಟೋಬರ್14 ರಿಂದ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗಾಗಿ ಹಾಗೂ ಸಂಚಾರಕ್ಕೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲುಕಿನ ಕಣಕುಪ್ಪೆ ಗ್ರಾಮದಲ್ಲಿ ಒಂದಷ್ಟು ಹೊತ್ತು ಗೊರವರ ನೃತ್ಯದಲ್ಲಿ ಪಾಲ್ಗೊಂಡ ನಂತರ ದಿನದ ಆಯಾಸವೆಲ್ಲ ಕಳೆದುಹೋಯಿತು.
— Siddaramaiah (@siddaramaiah) October 13, 2022
ಮೈಲಾರಲಿಂಗನ ಶಿಷ್ಯರೆಂದು ಕರೆದುಕೊಳ್ಳುವ ಗೊರವರು ಮಾಡುವ ಈ ನೃತ್ಯ ವಿಶಿಷ್ಟ ಜಾನಪದ ಕಲೆ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. pic.twitter.com/B3SxBvbN3q
ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ದೇಶದ್ರೋಹಿ ಎನ್ನುತ್ತಾರೆ. ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಮಾತನಾಡುವಂತಿಲ್ಲ. ಅವರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸುತ್ತಾರೆ. ಅವರು ಮಾಡುತ್ತಿರುವ ಅನೀತಿಗಳನ್ನು ಕೇಳಿದರೆ ಮುಗಿ ಬೀಳುತ್ತಾರೆ. ಈ ಹಿಂದೆ ಎಂದೂ ಸಹ ದೇಶದಲ್ಲಿ ಇಂತಹ ಭಯದ ವಾತಾವರಣ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ
ಭಾರತ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಜರುಗಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರು ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರು. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಮೊದಲು ನಾವು ಹೇಳಲಿಲ್ಲ. ಗುತ್ತಿಗೆದಾರರ ಸಂಘವೇ ಹೇಳಿದೆ. ಅದನ್ನೇ ನಾವು ಹೇಳಿದ್ದೇವೆ ಅಷ್ಟೇ. ಆದರೂ ನಮ್ಮ ವಿರುದ್ಧ ಹರಿಹಾಯ್ತಿದ್ದಾರೆ. ಹಾಗಾದರೆ ಇವರು ಮಾಡುವ ಅನೀತಿಗಳನ್ನು ಯಾರೂ ಪ್ರಶ್ನಿಸಬಾರದೇ? ಇವರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಸುಮ್ಮನಿರಬೇಕಾ?" ಎಂದು ಪ್ರಶ್ನಿಸಿದರು. ಅಲ್ಲದೆ ಸಂವಿಧಾನಾತ್ಮಕವಾಗಿ ನೀಡಿದ ಹಕ್ಕನ್ನು ಕಸಿದುಕೊಳ್ಳಲು ಇವರಾರು? ಎಂದು ಮರುಪ್ರಶ್ನಿಸುವು ಮೂಲಕ ಕಿಡಿಕಾರಿದರು.
ಬಿಜೆಪಿ ಸರ್ಕಾರದಿಂದ ಜನಪರ ಯೋಜನೆಗಳಿಲ್ಲ
"ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರವಾದ ಯಾವುದೇ ಯೋಜನೆಗಳಿಲ್ಲ. ಎರಡು ವರ್ಷಗಳಲ್ಲಿ ಬಡವರಿಗೆ ಒಂದು ಮನೆಯನ್ನು ನೀಡಿಲ್ಲ. ಬರೀ ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಜಾತಿ, ಧರ್ಮಗಳ ನಡುವೆ ಜಗಳ ಹಚ್ಚುತ್ತಿದ್ದಾರೆ. ಕೋಮು ಸೌಹಾರ್ದತೆ ಹಾಳುಗೆಡವಿದ್ದಾರೆ. ಮನುಷ್ಯ ಸಂಬಂಧಗಳನ್ನು ನಾಶ ಮಾಡಿದ್ದಾರೆ," ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಮ್ಮ ಅಧಿಕಾರದ ಅವಧಿಯಲ್ಲಿ 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಆದರೆ ಇವರ ಸರ್ಕಾರ ಏಕೆ ನಾವು ಒತ್ತಾಯಿಸುವ ಪ್ರಕರಣಗಳನ್ನು ಸಿಬಿಐಗೆ ನೀಡಲು ಹಿಂದೇಟು ಹಾಕುತ್ತಿದೆ? ಇವರನ್ನು ಮಾನಗೆಟ್ಟ ಜನ ಎನ್ನದೆ ಮತ್ತೇನು ಅನ್ನಬೇಕು ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications