ಚಿತ್ರದುರ್ಗ ಕೋಟೆಯಲ್ಲಿ ಒನಕೆ ಓಬವ್ವ ಸಮಾಧಿ ಮರುನಿರ್ಮಾಣ
ಚಿತ್ರದುರ್ಗ, ಜನವರಿ 28: ದಶಕಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಚಿತ್ರದುರ್ಗ ಪಾಳೇಗಾರರ ಕಾಲದ ವೀರ ವನಿತೆ ಒನಕೆ ಓಬವ್ವನ ಸಮಾಧಿಯನ್ನು ಮರುನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಚಿತ್ರದುರ್ಗ ಕೋಟೆಯೊಳಗೆ ಹೈದರಾಲಿಯ ಸೈನ್ಯವನ್ನು ಸದೆಬಡಿದ ಕರ್ನಾಟಕದ ವೀರ ನಾರಿ ಒನಕೆ ಓಬವ್ವನ ಸಮಾಧಿ ಕನಿಷ್ಟ ಕಳೆದ ಐದು ದಶಕಗಳಿಂದ ಶಿಥಿಲಾವಸ್ಥೆಯಲ್ಲಿ ಇತ್ತು. ಇದನ್ನು ನವೀಕರಿಸಲು ಸ್ಥಳಿಯರಿಂದಲೂ ಅನೇಕ ಪ್ರಯತ್ನಗಳಾದವು. ಆದರೆ ಅದು ಫಲಕಾರಿಯಾಗಲಿಲ್ಲ. ಕಳೆದ ಮೂರು ವರ್ಷಗಳಿಂದ ನಿಲುಮೆ ಬಳಗ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತಲಿತ್ತು. ಈಗ ಅದು ಅಂತಿಮ ಹಂತಕ್ಕೆ ಬಂದಿದೆ.
ನಿಲುಮೆ ಬಳಗದ ಈ ಪ್ರಯತ್ನಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡರಿಂದ ಬಲ ಮತ್ತು ವೇಗ ಸಿಕ್ಕಿತು. ಮುನಿರಾಜು ಗೌಡರು ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಇದಕ್ಕೆ ಸಂಬಂಧಪಟ್ಟ ಅಷ್ಟೂ ಇಲಾಖೆಗಳ ಕಚೇರಿಗಳನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಾಧಿ ಮರುನಿರ್ಮಾಣ ಕೆಲಸಕ್ಕೆ ವೇಗ ಕೊಟ್ಟರು. ಕಳೆದ ಆಗಸ್ಟ್ 7ಕ್ಕೆ ಈ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಾರಂಭ ಮಾಡಲಾಗಿತ್ತು.

ಸಮಾಧಿ ನಿರ್ಮಾಣ ಆರಂಭವಾದ ಆರು ತಿಂಗಳಿಗೆ ಅಂದರೆ, ಜನವರಿ 26ರಂದು ಚಿತ್ರದುರ್ಗದ ಏಳು ಸುತ್ತಿನ ಕೋಟೆಯೊಳಗೆ ಮತ್ತೆ ಒನಕೆ ಓಬವ್ವಳ ಸಮಾಧಿ ತಲೆ ಎತ್ತಿ ನಿಂತಿದೆ.
ಎಂಎಲ್ಸಿ ತುಳಸಿ ಮುನಿರಾಜು ಗೌಡರ ಭಗೀರಥ ಪ್ರಯತ್ನ, ನಿಲುಮೆ ಸಂಕಲ್ಪ ಮತ್ತು ಕೋಟ್ಯಂತರ ಕನ್ನಡಿಗರ ಆಶಯ ಫಲಿಸಿದ್ದು, ಶಿಥಿಲಗೊಂಡಿದ್ದ ಓಬವ್ವನ ಸಮಾಧಿ ಮತ್ತೆ ಸಮಾಜಕ್ಕೆ ದುರ್ಗದ ದುರ್ಗಿಯ ವೀರಗಾತೆಯನ್ನು ಹೇಳಲು ತಲೆಯೆತ್ತಿ ನಿಂತಿದೆ.

ಈ ಬಗ್ಗೆ ಮಾತನಾಡಿದ ಎಂಎಲ್ಸಿ ತುಳಸಿ ಮುನಿರಾಜು ಗೌಡ, ತೊಟ್ಟಿಲು ತೂಗುವ ಕೈ ರಾಷ್ಟ್ರ ರಕ್ಷಣೆಗೂ ಸೈ ಎನ್ನುವುದನ್ನು ಒನಕೆ ಓಬವ್ವ ಪ್ರಪಂಚಕ್ಕೆ ಸಾರಿ ಹೇಳಿದ್ದಾರೆ ಎಂದು ಹೇಳಿದರು.
ಹೈದರಾಲಿಯ ನೂರಾರು ಸೈನಿಕರನ್ನು ಏಕಾಂಗಿಯಾಗಿ ಎದುರಿಸಿ, ಕೋಟೆ ರಕ್ಷಿಸಿದ್ದ ಓಬವ್ವ ರಾಷ್ಟ್ರಕ್ಕೆ ಸ್ಫೂರ್ತಿ. ಓಬವ್ವ ಸಮಾಧಿಯ ಮರು ನಿರ್ಮಾಣಕ್ಕೆ ವಂಶಸ್ಥರು, ಸಮುದಾಯದವರು, ಸ್ಥಳೀಯರು ಐದಾರು ದಶಕಗಳಿಂದ ಆಗ್ರಹಿಸುತ್ತಿದ್ದರು. ಅವರೆಲ್ಲರ ಒತ್ತಾಸೆಯಾಗಿ ಸಮಾಧಿ ನಿರ್ಮಾಣ ಕಾರ್ಯವಾಗಿದೆ ಎಂದರು.

ವೀರ ವನಿತೆ ಓಬವ್ವನ ಸಮಾಧಿಗೆ ಪೂಜೆ ಸಲ್ಲಿಸಲು ಹೂವು, ಹಣ್ಣು ತಂದರೆ ಪುರಾತತ್ವ ಅಧಿಕಾರಿಗಳು ಆಕ್ಷೇಪಿಸುವುದು ಸರಿಯಲ್ಲ. ಪೂಜೆಗೆ ಅವಕಾಶ ನೀಡುವುದರ ಜೊತೆಗೆ ಇದನ್ನೊಂದು ಶಕ್ತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಎಂಎಲ್ಸಿ ತುಳಸಿ ಮುನಿರಾಜು ಗೌಡ ತಿಳಿಸಿದರು.












Click it and Unblock the Notifications