ನಿಯಮ ಉಲ್ಲಂಘಿಸಿದ ಚಿತ್ರದುರ್ಗದ ಅಬಕಾರಿ ಡಿಸಿ ಅಮಾನತ್ತಿಗೆ ಶಿಫಾರಸ್ಸು
ಚಿತ್ರದುರ್ಗ, ಜನವರಿ 16: ಸರ್ಕಾರಿ ನಿಯಮಗಳನ್ನು ಹಾಗೂ ಗ್ರಾಮದ ಜನರ ವಿರೋಧವನ್ನು ಉಲ್ಲಂಘಿಸಿ ವೈನ್ ಶಾಪ್ ಗೆ ಅನುಮತಿ ನೀಡಿದ್ದ ಚಿತ್ರದುರ್ಗ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಶಯನ ಅವರನ್ನು ಕಡ್ಡಾಯ ರಜೆ ತೆರಳುವಂತೆ ಸೂಚಿಸಿ, ಅಮಾನತ್ತು ಮಾಡುವಂತೆ ಸರ್ಕಾರಕ್ಕೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಶಿಫಾರಸ್ಸು ಮಾಡಿದರು.
ಇಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮದ್ಯ ಮಾರಾಟದಲ್ಲಿ ಅಕ್ರಮವೆಸಗಿದ್ದಾರೆಂದು ತಿಳಿದು ಬಂದಿತ್ತು ಹಾಗೂ ಮದ್ಯ ಕಳವು ಮಾಡಿದ್ದು, ಇದೆಲ್ಲವನ್ನು ಕೂಡ ಎಸಿಬಿ ಅವರಿಗೆ ತನಿಖೆ ನಡೆಸಲು ವಹಿಸಲಾಗಿತ್ತು. ಅಷ್ಟೆ ಅಲ್ಲದೇ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಸ್ವಕ್ಷೇತ್ರ ಮೊಳಕಾಲ್ಮೂರಿನ ಒಂದೇ ಗ್ರಾಮದಲ್ಲಿ ಮೂರು ಬಾರ್ ಗಳಿಗೆ ಅನುಮತಿ ನೀಡಿದ್ದರು ಎನ್ನಲಾಗಿದೆ.
ಚಿತ್ರದುರ್ಗ: ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
ಬಾರ್ ಗಳಿಗೆ ಏಕೆ ಅನುಮತಿ ನೀಡಿದ್ದೀರಿ ಎಂದು ಅಧಿಕಾರಿಯನ್ನು ಸಚಿವ ಶ್ರೀರಾಮುಲು ತರಾಟೆಗೆ ತೆಗೆದುಕೊಂಡರು. ಆಂಧ್ರಕ್ಕೆ ಸಾಗಿಸಲು ನೀವು ಅನುಮತಿ ನೀಡಿದ್ದೀರಿ, ಎಲ್ಲಾ ದಾಖಲೆಗಳು ಕೂಡ ನಮ್ಮಲ್ಲಿವೆ. ಇಂತಹ ಅಕ್ರಮಗಳನ್ನು ಎಸಗಿರುವ ಅಬಕಾರಿ ಡಿಸಿ ನಾಗಶಯನ ಅವರನ್ನು ಸಭೆಯಲ್ಲಿ ತೀರ್ಮಾನಿಸಿ ಅವರನ್ನು ಕೂಡಲೇ ಕಡ್ಡಾಯ ರಜೆ ಮೇಲೆ ತೆರಳುವಂತೆ ಅದೇಶ ನೀಡಿದರು.
ಅದರಂತೆ ಅಮಾನತ್ತು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ನಂತರ ದೂರವಾಣಿ ಕರೆ ಮಾಡಿ ನಾಗಶಯನ ಅವರನ್ನು ಕೂಡಲೇ ಅಮಾನತ್ತು ಮಾಡುವಂತೆ ಮನವಿ ಮಾಡಿದ್ದು, ಅಬಕಾರಿ ಸಚಿವರಿಗೆ ನಿಯಮಾವಳಿ ಮಾಡಿ ಕಳುಹಿಸುವಂತೆ ಹೇಳಿದರು.
ಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣ ಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.