ಅತ್ಯಾಚಾರ ಆರೋಪ, ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಎಫ್ಐಆರ್ ದಾಖಲು !
ಚಿತ್ರದುರ್ಗ, ಅಕ್ಟೋಬರ್ 25: ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಐದು ವರ್ಷಗಳ ಹಿಂದೆ ಉಮೇಶ್ ದಾವಣಗೆರೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರೋಪಿ ಉಮೇಶ್ ಸಂತ್ರಸ್ತ ಯುವತಿಗೆ ಸೋದರ ಸಂಬಂಧಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ಬಳಿಕ ಮತ್ತೆ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ನಡೆದಿದ್ದು, ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಅಂದಹಾಗೆ ಸಿಪಿಐ ಉಮೇಶ್ಗೆ ಎರಡು ಮದುವೆಯಾಗಿ ಇಬ್ಬರು ಹೆಂಡತಿಯರು ಇದ್ದಾರಂತೆ. ಇದೀಗ ಸಂತ್ರಸ್ತೆಯನ್ನು ಮೂರನೇ ಹೆಂಡತಿಯಂತೆ ನನ್ನೊಂದಿಗೆ ಇರು ಎಂದು ಸಂತ್ರಸ್ತ ಯುವತಿಗೆ ಉಮೇಶ್ ಒತ್ತಾಯಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಸಂತ್ರಸ್ತೆ ಉಮೇಶ್ ಮಾತಿಗೆ ಒಪ್ಪದಿದ್ದಾಗ ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ. ಯುವತಿಯ ದೂರಿನ ಹಿನ್ನೆಲೆಯಲ್ಲಿ 376 ಕ್ಲಾಸ್ (2)(k)(n), 323 , 504, 506 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಯುವತಿ ದೂರು ನೀಡುತ್ತಿದ್ದಂತೆ ಸಿಪಿಐ ಉಮೇಶ್ ತಲೆಮರೆಸಿಕೊಂಡಿದ್ದಾನೆ.
ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಸಿಪಿಐ ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಆದೇಶಿಸಿದ್ದಾರೆ.
ಭೀಕರ ಅಪಘಾತಕ್ಕೆ ಮೂವರು ಸಾವು
ದೀಪಾವಳಿ ಹಬ್ಬದಂದು ಕಾರೊಂದು ರಸ್ತೆ ವಿಭಜಕ್ಕೆ ಡಿಕ್ಕಿಯಾದ ಪರಿಣಾಮವಾಗಿ ಮೂವರು ಅಸುನೀಗಿರುವ ಘಟನೆ ಚಿತ್ರದುರ್ಗ ನಗರದಲ್ಲಿ ಸೋಮವಾರ ಮಧ್ಯರಾತ್ರಿ 12ರ ಸಮಯದಲ್ಲಿ ನಡೆದಿದೆ.

ಗಾಂಧಿ ವೃತ್ತದ ಕಡೆಗೆ ಹೋಗುವಾಗ ವೇಗವಾಗಿ ಬಂದ ಕಾರೊಂದು ಪ್ರವಾಸಿ ಮಂದಿರದ ಮುಂಭಾಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆ ಪರಿಣಾಮವಾಗಿ ಸ್ಥಳದಲ್ಲೇ ಕಾರು ಚಾಲಕ ಮನು ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತಿಬ್ಬರು ಇಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗ ಮದ್ಯದಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಮೃತರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ. ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications