ಸಿದ್ದರಾಮಯ್ಯನೇ ರಾಮ, ನಾನು ಆಂಜನೇಯ, ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ-ಮಾಜಿ ಸಚಿವ ಹೀಗೆ ಹೇಳಿದ್ದೇಕೆ?
ಚಿತ್ರದುರ್ಗ, ಜನವರಿ, 01: ಸಿಎಂ ಸಿದ್ದರಾಮಯ್ಯ ಅವರೇ ಶ್ರೀರಾಮ, ಮತ್ತೆ ಯಾಕೆ ಆ ರಾಮನಿಗೆ ಹೋಗಿ ಶ್ರೀರಾಮನನ್ನು ಪೂಜಿಸಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ಧರಾಮಯ್ಯಗೆ ಆಹ್ವಾನವಿಲ್ಲದ ವಿಚಾರಕ್ಕೆ ಉತ್ತರಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು.

ಸ್ವತಃ ಸಿದ್ಧರಾಮಯ್ಯ ಅವರೇ ರಾಮ, ಆ ರಾಮನಿಗೇಕೆ ಹೋಗಿ ಪೂಜಿಸಬೇಕು. ಸಿದ್ದರಾಮನ ಹುಂಡಿಯಲ್ಲಿ ರಾಮನ ದೇವಸ್ಥಾನ ಇದೆ, ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ, ಅದು ಬಿಜೆಪಿ ಅವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ ಎಂದು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಬಗ್ಗೆ ವ್ಯಂಗ್ಯವಾಡಿದರು.
ನಮ್ಮ ರಾಮ ಎಲ್ಲಾ ಕಡೆಗೂ ಇದ್ದಾನೆ, ನಾನು ಆಂಜನೇಯ. ನಾವೆಲ್ಲಾ ಶ್ರೀರಾಮನ ಭಕ್ತರು. ನಮ್ಮ ಸಮುದಾಯದವರು ರಾಮ, ಆಂಜನೇಯ, ಹನುಮಂತ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿ ಎಂದರು.
ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಠಿಯ ಭ್ರಮೆ ಬಿಜೆಪಿಗಿದೆ. ಬಿಜೆಪಿ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ? ಎಂದು ಪ್ರಶ್ನಿಸಿದರು. ಅಲ್ಲದೆ ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ? ಎಂದು ಮತ್ತೊಮ್ಮೆ ಪ್ರಶ್ನೆ ಹಾಕಿದರು.
ನಾವೆಲ್ಲಾ ಹಿಂದೂಗಳೇ, ಹಿಂದೂ, ಹಿಂದೂ ಧರ್ಮವನ್ನು ಬಿಜೆಪಿ ಕೊಂಡುಕೊಂಡಿಲ್ಲ. ಧರ್ಮದಲ್ಲಿನ ಮೇಲು ಕೀಳು, ಶೋಷಣೆಗೆ ಪರಿಹಾರ ನೀಡಿದ್ದಾರೆಯೇ?, ಮಂದಿರ ನಿರ್ಮಾಣ ಸಾಕು, ಮನೆ-ಮನ ಕಟ್ಟುವ ಕೆಲಸ ಆಗಬೇಕು. ದೇಶದ ಜನ ನಾಯಿ ನರಿ ವಾಸಿಸಲು ಯೋಗ್ಯವಲ್ಲದ ಸ್ಥಳದಲ್ಲಿ ವಾಸವಾಗಿದ್ದಾರೆ. ಅಂಥವರ ಕಣ್ಣಿರೊರೆಸಿ ಸೂರುಕೊಟ್ಟು ರಕ್ಷಣೆ ಮಾಡುವ ಕೆಲಸವಾಗಬೇಕಿದೆ ಎಂದರು.
ಸೂರಿಲ್ಲದವರಿಗೆ ಮನೆ ಕಟ್ಟಿಸಿ ರಾಮಮಂದಿರ ಅಂತ ಹೆಸರಿಡಿ. ಆಗ ನಿಜವಾದ ರಾಮ ಬಂದು ಆಶೀರ್ವಾದ ಮಾಡುತ್ತಾನೆ. ವೋಟಿನ ರಾಮ ಅಲ್ಲ, ಓಟಿಗಾಗಿ ಬಿಜೆಪಿ ರಾಮನ ಮಾಡುವುದು ಬೇಡ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications