ಹಿರಿಯೂರು: ಗುಂಡಿಮಯವಾದ ರಸ್ತೆಗಳು; ಸ್ವಲ್ಪ ಯಾಮಾರಿದ್ರೂ ಆಸ್ಪತ್ರೆ ಸೇರೋದು ಗ್ಯಾರಂಟಿ.!
ಹಿರಿಯೂರು, ಆಗಸ್ಟ್, 30: ಮಳೆಗಾಲ ಬಂತೆಂದರೆ ಸಾಕು ಚಿತ್ರದುರ್ಗ ಜಿಲ್ಲೆಯ ಹಿರಿಯೂ ತಾಲ್ಲೂಕಿನ ಕೆಲವು ರಸ್ತೆಗಳಂತೂ ಕೆರೆಯಂತೆ ಮಾರ್ಪಡುತ್ತವೆ. ಇನ್ನು ಇದೀಗ ಹಿರಿಯೂರು ನಗರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ರಸ್ತೆ ದುರಸ್ತಿ ಮಾಡಿಸುವಂತೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ.
ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಗಳ ತುಂಬೆಲ್ಲಾ ಗುಂಡಿ ಬಿದ್ದು ಹೋಗಿವೆ ಸ್ವಾಮಿ. ಇಲ್ಲಿ ಹ್ಯಾಂಡಲ್, ಸ್ಟೇರಿಂಗ್, ಮೈಗಟ್ಟಿ ಹಿಡ್ಕೊಂಡು ಗಾಡಿ ಓಡಿಸ್ರಪ್ಪ. ಇಲ್ಲ ಅಂದರೆ ನಿಮ್ ಮೂಳೆ ಸಡಿಲ ಆಗೋದಂತೂ ಗ್ಯಾರಂಟಿ. ಅಲ್ಲದೆ ಸ್ವಲ್ಪ ಎಚ್ಚರ ತಪ್ಪಿದರೂ ಕೈಕಾಲು, ಸೊಂಟ ಮುರಿದು ಆಸ್ಪತ್ರೆ ಸೇರೋದಂತೂ ಗ್ಯಾರಂಟಿ. ಇನ್ನು ಇಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಗಾಡಿ ಓಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಟಿಬಿ ವೃತದಿಂದ ಹಿಡಿದು, ಗ್ರಾಮೀಣ ಬ್ಯಾಂಕ್ ಮುಂಭಾಗ, ತೊರೆ ಸೇತುವೆ, ಗಾಂಧಿ ಸರ್ಕಲ್, ನಗರ ಠಾಣೆ ಮುಂಭಾಗ, ಹುಳಿಯಾರ್ ರಸ್ತೆ ಚಾನೆಲ್‌ವರೆಗೂ ಕಣ್ಣಿಗೆ ಕಾಣೋದು ಬರೀ ಗುಂಡಿಗಳೇ. ನಗರದಲ್ಲಿ ಪದೇ ಪದೇ ಗುಂಡಿ ಬೀಳುವುದರಿಂದ ಸಾರ್ವಜನಿಕ ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಅನೇಕ ಜನರು ಬಿದ್ದು ಗಾಯಗೊಂಡು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿರುವವರಿದ್ದಾರೆ. ಆದರೆ ಇತ್ತೀಚೆಗಂತೂ ಇಲ್ಲಿನ ರಸ್ತೆಗಳು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಚಾಲಕರನ್ನು ಹೈರಾಣ ಮಾಡಿಬಿಟ್ಟಿವೆ.
ಗುಂಡಿ ಮುಚ್ಚಿ, ಗುಂಡಿ ಮುಚ್ಚಿ ಅಂತಾ ಎಷ್ಟೇ ಬಾರೀ ಹೇಳಿದರೂ ಯಾರೂ ಗುಂಡಿ ಮುಚ್ಚುತ್ತಿಲ್ಲ. ಇನ್ನು ನಗರದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಹತ್ತಾರು ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಧರ್ಮಪುರ ಹಾಗೂ ಹುಳಿಯಾರು ಭಾಗದಿಂದ ನಗರಕ್ಕೆ ಬಂದರೆ ಗುಂಡಿಗಳಿಂದ ಸ್ವಾಗತ ಸಿಗುತ್ತದೆ. ಕಳಪೆ ಕಾಮಗಾರಿಯಿಂದ ಪದೇ ಪದೇ ಗುಂಡಿ ಬೀಳುತ್ತವೆ. ಈ ಗುಂಡಿ ಬಿದ್ದ ರಸ್ತೆಗಳಲ್ಲಿ ಪ್ರತಿದಿನ ಸಂಚರಿಸುವ ರೋಗಿಗಳು, ವಯೋವೃದ್ಧರು, ಶಾಲಾ ಮಕ್ಕಳು ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ.
ನಗರದಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಅದೆಷ್ಟೋ ಬೈಕ್ ಸವಾರು ಕೈ, ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿರುವ ಉದಾಹರಣೆಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹ ಗುಂಡಿ ಬಿದ್ದ ರಸ್ತೆಯಲ್ಲಿ ಓಡಾಡುತ್ತಿದ್ದು, ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ. ಅಲ್ಲದೆ, ಟಿಬಿ ವೃತ್ತದಿಂದ ಗಾಂಧಿ ಸರ್ಕಲ್‌ವರೆಗೂ ರಾತ್ರಿ ವೇಳೆ ವಿದ್ಯುತ್ ಕಂಬದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ, ಕತ್ತಲೆ ಭಾಗ್ಯವನ್ನು ಕಾಣಬಹುದಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುತ್ತಾರೆಯಾ ಎಂದು ಕಾದು ನೋಡಬೇಕಿದೆ.
ಈ ಕುರಿತು ದೂರವಾಣಿ ಮೂಲಕ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಗರದಲ್ಲಿ ಬಿದ್ದಿರುವ ಗುಂಡಿಗಳ ಬಗ್ಗೆ ನಗರಸಭೆ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. 10 ಲಕ್ಷ ರೂಪಾಯಿ ಟೆಂಡರ್ ಕರೆಯಲಾಗಿದ್ದು, ಯಾರಿಗೆ ಎಲ್ಓನ್ ಬಂದಿದೆಯೋ ಅವರಿಗೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ಟೆಂಡರ್ ಕಥೆ ಹೇಳ್ಬೇಡಿ ಮೊದಲು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಿ. ಇಲ್ಲ ಅಂದ್ರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದಿದ್ದೇನೆ. ಒಂದೆರಡು ದಿನಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.












Click it and Unblock the Notifications