ನಾನು ಎಲ್ಲಿ ನಿಲ್ಲಬೇಕು ಎಂದು ಪಕ್ಷ ತೀರ್ಮಾನಿಸಲಿದೆ: ಬಿ.ವೈ. ವಿಜಯೇಂದ್ರ
ಚಿತ್ರದುರ್ಗ, ಜೂ. 3: ಮುಂಬರುವ 2023ರ ವಿಧಾನಸಭಾ ಚುನಾವಣೆ ರಂಗೇರುತ್ತಿತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ಅವರ ಸ್ಪರ್ಧೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. 2023ರ ವಿಧಾನಸಭಾ ಚುನಾವಣೆಗೆ ಶಿರಾ, ಹೊಸದುರ್ಗ, ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಎಲ್ಲಿ ನಿಲ್ಲಬೇಕು ಎಂಬ ಬಗ್ಗೆ ಪಕ್ಷ ತೀರ್ಮಾನಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಅವರು ನೂತನವಾಗಿ ಆರಂಭಿಸಿರುವ ಜನಸಂಪರ್ಕ ಕಚೇರಿ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
"ಪಕ್ಷ ಏನು ಜವಬ್ದಾರಿ ಕೊಡುತ್ತದೆ ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ. ಜನಸೇವೆ ಮಾಡಲು ಯಾವುದೇ ಸ್ಥಾನಮಾನ ಬೇಕಿಲ್ಲ ಎಂದರು. ಇನ್ನು ಹೊಸದುರ್ಗದಲ್ಲಿ ಲಿಂಗಮೂರ್ತಿ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದಾರೆ ಆಗಾಗಿ ಅವರು ಜನಸಂಪರ್ಕ ಕಛೇರಿ ಆರಂಭಿಸಿದ್ದಾರೆ. ಅದನ್ನು ಉದ್ಘಾಟಿಸಲು ಬಂದಿದ್ದೇನೆ ಎಂದು ತಿಳಿಸಿದರು. ಇನ್ನು ಮುಂಬರುವ ಚುನಾವಣೆಗೆ ಯಾರು ನಿಲ್ಲಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.

ಗೈರಾದ ಮಾತ್ರಕ್ಕೆ ಭಿನ್ನಮತ ಅಲ್ಲ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಅವರು ನೂತನವಾಗಿ ಆರಂಭಿಸಿರುವ ಜನಸಂಪರ್ಕ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಗೂಳಿಹಟ್ಟಿ ಡಿ ಶೇಖರ್ ಗೈರಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ "ಯಾವುದೋ ಕೆಲಸದ ಮೇಲೆ ಹೋಗಿದ್ದಾರೆ. ಅವರೂ ಕೂಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಗೈರಾದ ಮಾತ್ರಕ್ಕೆ ಭಿನ್ನಮತ ಎಂದು ಅರ್ಥೈಸಬೇಕಾಗಿಲ್ಲ" ಎಂದು ಸಮರ್ಥಿಸಿಕೊಂಡರು.
"ಹೊಸದುರ್ಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮೂಲಕ ನನ್ನನ್ನು ಸ್ವಾಗತಿಸಿದ್ದಾರೆ ಬಹಳ ಸಂತೋಷವಾಯಿತು ಅವರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.

ಊಹಾ ಪೋಹಗಳ ಮೇಲೆ ಅನಗತ್ಯ ಚರ್ಚೆ ಬೇಡ
ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ಶಾಲಾ ಮಕ್ಕಳ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. " ಊಹಾ ಪೋಹಗಳ ಮೇಲೆ ಅನಗತ್ಯ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಗೊಂದಲಗಳನ್ನು ಪರಿಹರಿಸುತ್ತಾರೆ ಎಂದು ಹೇಳಿದರು. ಶಿಕ್ಷಣ ಸಚಿವರು ಮಠಾಧೀಶರನ್ನು ಭೇಟಿ ಮಾಡಿದ್ದು, ಶ್ರೀಗಳಿಗಿದ್ದ ಊಹಾಪೋಹದ ಗೊಂದಲಗಳ ಬಗ್ಗೆ ವಿವರಣೆ ನೀಡಿದರು.
ಈ ವಿಚಾರವಾಗಿ ಸಚಿವರ ಮನೆ ಮುಂದೆ ವಿರೋಧ ಪಕ್ಷಗಳು ಸುಖಾಸುಮ್ಮನೆ ಗಲಭೆ ಸೃಷ್ಟಿಸುವುದು ತಪ್ಪು ಎಂದರು.

ಪತ್ರ ಬರೆಯುವುದು ಸರಿಯಲ್ಲ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ. ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನು ಹಿಡಿದು ನೇತಾಡುತ್ತಿದ್ದಾರೆ. ಪಠ್ಯ ಪುಸ್ತಕದಲ್ಲಿ ಏನಾದರೂ ತಪ್ಪುಗಳಿದ್ದರೇ ಹೇಳಿ ಅದನ್ನು ಸರಿಪಡಿಸುತ್ತೇವೆ. ಮುಖ್ಯಮಂತ್ರಿ ಕೂಡಾ ಇದೇ ಭರವಸೆಯನ್ನು ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪುರವರಿಗೆ ನಾವು ಯಾವುದೇ ರೀತಿಯ ಅವಮಾನ ಮಾಡಿಲ್ಲ ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಏನು ಸರಿಮಾಡಬೇಕು ಎಂದು ಸಲಹೆ ಕೊಡಲಿ ಎಂದು ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನವಾಗಿದ್ದಲ್ಲಿ ಅದು ತಪ್ಪು. ನಾವು ಗೌರವ ಕೊಟ್ಟವರಿಗೆ ಅಪಮಾನ ಮಾಡುವ ಕೆಲಸ ಮಾಡಿಲ್ಲ. ಒಂದು ವೇಳೆ ಅಂತಹುದ್ದೇನಾದರೂ ಇದ್ದಲ್ಲಿ ಆ ಬಗ್ಗೆ ರಾಜೀ ಮಾಡಿಕೊಳ್ಳು ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಟ ಮಾಡಿದ ಮಹನೀಯರ ಬಗ್ಗೆ ಪಠ್ಯದಲ್ಲಿ ಅಳವಡಿಸುವುದು ಸರಿ. ಆದರೆ ಟಿಪ್ಪು ಬಗ್ಗೆಯೇ ಮೂರೂವರೆ ಪುಟಗಳ ಪಠ್ಯ ಮಾತ್ರ ಇದ್ದರೆ ಸಾಕೆ? ಬೇರೆ ಹೋರಾಟಗಾರರ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯವಿಲ್ಲವೇ? ಹಿಂದೆಲ್ಲಾ ಸ್ವಾತಂತ್ರ್ಯದ ಬಗ್ಗೆ ಇತಿಹಾಸ ತಿರುಚುವ ಕೆಲಸ ಮಾಡಲಾಗಿದೆ. ಅದನ್ನು ಸರಿ ಮಾಡುವ ಕೆಲಸ ಈಗ ನಡೆಯುತ್ತಿದೆ ಎಂದು ಪಠ್ಯ ಪರಿಷ್ಕರಣೆ ಬಗ್ಗೆ ಸಮರ್ಥನೆ ಮಾಡಿಕೊಂಡರು.

ನನ್ನ ಪಠ್ಯ ಮುಂದುವರಿಸದಂತೆ ಖಡಕ್ಕಾಗಿ ಪತ್ರ
ಸರ್ಕಾರದ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು ಎನ್ನುವ ಮೂಲಕ ಶಿಕ್ಷಣ ಸಚಿವರಿಗೆ ಸಾಹಿತಿ ದೇವನೂರು ಮಹದೇವ ಮತ್ತೆ ಚಾಟಿ ಬೀಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಸಾಹಿತಿ ದೇವನೂರ ಮಹದೇವ ಅವರು ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
‘‘ಈ ಹಿಂದೆ, ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ಮೇ 26ರಂದು ನಿಮಗೆ ಪತ್ರ ಬರೆದಿದ್ದೆ. ಆ ಪತ್ರದಲ್ಲಿ ನನಗೆ ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ‘‘ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ,'' ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದನ್ನು ಪಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರವರಿಗೂ ಬರೆದು ಕೊರಿಯರ್ ಮಾಡಿದ್ದ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ.
ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು. ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ,'' ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications