ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಲ್ಲಿ ಮಹಾ ಮಳೆ, ದುರ್ಗದಲ್ಲಿ ಬೇಯುತಿದೆ ಇಳೆ (ವಿಶೇಷ ವರದಿ)

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮುಂಗಾರು ಪೂರ್ವ ಮಳೆಯು ಧೋ ಎಂದು ಸುರಿದಿದ್ದರೂ, ಐತಿಹಾಸಿಕ ಜಿಲ್ಲೆಯಾದ ಚಿತ್ರದುರ್ಗದಲ್ಲಿ ರಣ ಬಿಸಿಲು ಇದೆ. ಮಳೆಯೆಂಬುದು ಮರೀಚಿಕೆಯಾಗಿದೆ.

By ವಿಶೇಷ ವರದಿ
|
Google Oneindia Kannada News

ಬೆಂಗಳೂರಿನಲ್ಲಿ ದಿನಂಪ್ರತಿ ಧೋ ಎಂದು ಮಳೆ ಸುರಿಯುತ್ತಿದೆ. ಮರಗಳು ಉರುಳುತ್ತಿವೆ, ಮನುಷ್ಯರು ಕೊಚ್ಚಿಕೊಂಡು ಹೋಗುತ್ತಿದ್ದಾರೆ. ಸಂಜೆಯಾಯ್ತು ಎಂದರೆ, ಸುರಿಯು ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ಥವಾಗಿದೆ.

ಇಡೀ ರಾಜಧಾನಿಯೇ ಕೊಚ್ಚಿಹೋಗುವಂಥ ಮಳೆ ಅಲ್ಲಿ ಸುರಿಯುತ್ತಿದ್ದರೆ ಬಯಲು ನಾಡು ಚಿತ್ರದುರ್ಗದಲ್ಲಿ ಮಳೆ ಎಂಬುದು ನಿಜಕ್ಕೂ ಮರೀಚಿಕೆಯಾಗಿದೆ. ಇಲ್ಲಿನ ಜನ ಮಳೆಯನ್ನು ಕೇವಲ ನ್ಯೂಸ್ ಚಾನೆಲ್ ಗಳಲ್ಲಿ ನೋಡಿಯೇ ಕಣ್ತುಂಬಿಕೊಳ್ಳುವಂತಾಗಿದೆ.

ಎಲ್ಲೆಲ್ಲಿ ನೋಡಿದರೂ ಬಿರುಬಿಸಿಲು, ಕೃಷಿಯನ್ನು ಕಾಣದೇ ಅದೆಷ್ಟೋ ದಿನಗಳಾಗಿವೆ ಎಂಬಂತಿರುವ ಪಾಳು ಹೊಲ ಗದ್ದೆಗಳು, ಒಣಗಿದ ಗಿಡ ಮರಗಳು.. ಈ ಐತಿಹಾಸಿಕ ನಗರಕ್ಕೆ ಬರುವ ಜನರನ್ನು ಸ್ವಾಗತಿಸುತ್ತವೆ. ನಿಮ್ಮ ಕಣ್ಣ ದೃಷ್ಟಿ ಹಾಯುವವರೆಗೂ ಒಣಗಿದ ಹೊಲ ಗದ್ದೆಗಳೇ ಕಾಣುತ್ತವೆ.

ಮೊದಲೇ ಬರದ ನಾಡಾದ ಈ ಜಿಲ್ಲೆಯಲ್ಲಿ ಮಳೆ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡಿ ಹೋಗಿದೆಯಷ್ಟೆ. ರೈತರಿಗೆ ತೃಪ್ತಿಕರವಾದಂಥ ಮಳೆ ಬಂದಿಲ್ಲ. ಅಂಥದ್ದೊಂದು ಮಳೆಗೆ ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.

ಈ ಜಿಲ್ಲೆಯ ಜನರ 'ಬರದ ಬರೆಯ ಬದಕು- ಬವಣೆ'ಗಳ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಧಿಕ ಬರದ ಛಾಯೆ

ಅಧಿಕ ಬರದ ಛಾಯೆ

ಸುಮಾರು 8,388 ಚದುರ ಕಿ.ಮೀ.ಗಳಷ್ಟು ವಿಸ್ತೀರ್ಣವಿರುವ ಈ ಜಿಲ್ಲೆಯು ಕಳೆದೊಂದು ದಶಕದಿಂದ ಅತಿ ಹೆಚ್ಚು ಬರದ ಬೇಗೆಯಲ್ಲಿ ಬೇಯುತ್ತಿದೆ. ಅದಕ್ಕಿಂತ ಮುಂಚೆ ಇಲ್ಲಿ ಬರ ಇರಲಿಲ್ಲವೆಂದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಛಾಯೆ ಅತ್ಯಧಿಕವಾಗಿದೆ. ಪ್ರತಿ ವರ್ಷ ಮುಂಗಾರು ಪೂರ್ವ, ಮುಂಗಾರು ಉತ್ತರ ಮಳೆಯ ನಿರೀಕ್ಷೆಗಳನ್ನು ಹುಸಿ ಮಾಡಿಕೊಂಡಿರುವ ಈ ಜಿಲ್ಲೆಯಲ್ಲಿ ಪುಷ್ಕಳ ನೀರು ಮರೀಚಿಕೆಯಾಗಿದೆ.

ಇನ್ನೂ ಕೃಷಿ ಚಟುವಟಿಕೆ ಆರಂಭವಾಗಿಲ್ಲ!

ಇನ್ನೂ ಕೃಷಿ ಚಟುವಟಿಕೆ ಆರಂಭವಾಗಿಲ್ಲ!

ಜಿಲ್ಲೆಯ ಪ್ರಮುಖ ತಾಲೂಕುಗಳಾದ ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಮೊಳಕಾಲ್ಮುರುಗಳು ಭೀಕರ ಬರದಿಂದ ತತ್ತರಿಸಿವೆ. ಹಾಗಾಗಿಯೇ, ರಾಜ್ಯದ ಕೆಲವು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯು ಬಿದ್ದ ಕೂಡಲೇ ಕೃಷಿ ಚಟುವಟಿಕೆಗಳು ಶುರುವಾಗಿದ್ದರೂ ಈ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕೃಷಿ ಚಟುವಟಿಕೆ ಶುರುವಾಗಿಲ್ಲ.

ಮಳೆಯ ನಿರೀಕ್ಷೆಯಲ್ಲಿ ರೈತರು

ಮಳೆಯ ನಿರೀಕ್ಷೆಯಲ್ಲಿ ರೈತರು

ಶೇಂಗಾ, ಮೆಕ್ಕೆಜೋಳ, ರಾಗಿ, ನೀರುಳ್ಳಿ, ಜೋಳ - ಇವೇ ಇಲ್ಲಿನ ರೈತರು ಬೆಳೆಯುವ ಪ್ರಮುಖ ಬೆಳೆಗಳು. ಈಗ (ಮೇ ಅಂತ್ಯಕ್ಕೆ) ಭೂಮಿ ತೇವವಾಗುವಷ್ಟು ಮಳೆ ಬಂದಿದ್ದರೆ, ನೀರುಳ್ಳಿ ಬೇಸಾಯದ ಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ, ಈ ಬೆಳೆಗೆ ಪ್ರಸಿದ್ಧಿಯಾದ ಚಿತ್ರದುರ್ಗ ತಾಲೂಕು, ಚಳ್ಳಕೆರೆ ತಾಲೂಕುಗಳ ರೈತರು ಮಳೆಯ ಹನಿಗಳನ್ನು ಕಾತುರದಿಂದಲೇ ನಿರೀಕ್ಷಿಸುತ್ತಿದ್ದಾರೆ.

ಪದೇ ಪದೇ ಆಗಸದೆಡೆ ಮುಖ ಮಾಡುವ ರೈತರು

ಪದೇ ಪದೇ ಆಗಸದೆಡೆ ಮುಖ ಮಾಡುವ ರೈತರು

ವಾಡಿಕೆಯಂತೆ ಮಳೆಯಾದರೆ, ಈ ಹೊತ್ತಿಗೆ ಅಥವಾ ಜೂನ್ ತಿಂಗಳಲ್ಲಿ ಭೂಮಿ ತಂಪಾಗುವಂಥ ಮಳೆ ಬಂದರೆ ಜುಲೈ ಮೊದಲ ವಾರದ ಹೊತ್ತಿಗೆ ಶೇಂಗಾ ಬಿತ್ತನೆ ಆರಂಭ ಮಾಡುವ ಲೆಕ್ಕಾಚಾರದಲ್ಲಿ ಇಲ್ಲಿನ ರೈತರು ಇದ್ದಾರೆ. ಆದರೆ, ಮಳೆಯಾದರೂ ಎಲ್ಲಿ ಎಂಬ ನಿರಾಸೆ ರೈತರದ್ದು.

 ಡಿಸಿ ಸೂಚನೆಯಿದೆ, ಆದರೆ ಮಳೆ ಎಲ್ಲಿದೆ?

ಡಿಸಿ ಸೂಚನೆಯಿದೆ, ಆದರೆ ಮಳೆ ಎಲ್ಲಿದೆ?

ಇದೇ ಪರಿಸ್ಥಿತಿ ಮುಂದುವರಿದರೆ, ರೈತರ ಸ್ಥಿತಿ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ. ಕಳೆದ ವಾರವೇ ಇಲ್ಲಿನ ಜಿಲ್ಲಾಧಿಕಾರಿಯವರು, ಮುಂಗಾರು ಪೂರ್ವ ಮಾರುತಗಳು ಶುರುವಾದ ಕೂಡಲೇ ಕೃಷಿ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೃಷಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಮಳೆ ಎಂಬುದೇ ಇಲ್ಲಿ ಬಂಗಾರವಾಗಿದೆ. ಹೀಗಿರುವಾಗ, ಕೃಷಿ ಇಲಾಖೆಯಾದರೂ ಏನು ಮಾಡೀತು?

ಬರ ಪರಿಹಾರ ಸಮರ್ಪಕವಾಗಿಲ್ಲ ಎಂಬ ಅಸಮಾಧಾನ

ಬರ ಪರಿಹಾರ ಸಮರ್ಪಕವಾಗಿಲ್ಲ ಎಂಬ ಅಸಮಾಧಾನ

ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದರೆ, ಕಳೆದ ವರ್ಷದಂತೆ ಜಿಲ್ಲಾಧಿಕಾರಿಗಳು, ಬರ ಪರಿಹಾರದ ಯೋಜನೆಯಡಿ ರೈತರಿಗೊಂದಿಷ್ಟು ಜೀವನೋಪಾಯಕ್ಕಾಗಿ ಒಂದಿಷ್ಟು ಹಣ ಸಿಗಬಹುದು. ಆದರೆ, ಇದು ಕಳೆ ವರ್ಷ ಸಮರ್ಪಕವಾಗಿ ಆಗಿಲ್ಲ ಎಂಬುದು ಇಲ್ಲಿನ ರೈತರ ಗೋಳು. ಬರ ಪರಿಹಾರವೆಂಬುದು ಕೆಲವರಿಗೆ ಸಿಕ್ಕಿದೆ, ಹಲವರಿಗೆ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಾರೆ ಈ ಭಾಗದ ರೈತರು.

ಗುಳೆ ಹೋಗಿ ದುಡಿಯಬೇಕಾದ ಅನಿವಾರ್ಯತೆ

ಗುಳೆ ಹೋಗಿ ದುಡಿಯಬೇಕಾದ ಅನಿವಾರ್ಯತೆ

ಈ ಬಾರಿಯೂ ಮಳೆ ಬರದಿದ್ದರೆ ಏನು ಮಾಡುತ್ತೀರಿ ಎಂದು ರೈತರನ್ನು ಕೇಳಿದರೆ, ''ದೂರದೂರುಗಳಿಗೆ ಗುಳೆ ಹೋಗುತ್ತೇವೆ. ಒಂದಿಷ್ಟು ಕೂಲಿ ನಾಲಿ ಮಾಡಿ ದುಡಿದು ತರುತ್ತೇವೆ. ಹಾಗೆ ಹೋದರೆ, ಮನೆಯವರಿಗೊಂದಿಷ್ಟು ಆಸರೆಯಾಗುತ್ತದೆ'' ಎಂದು ತಿಳಿಸುತ್ತಾರೆ ಅವರು.

English summary
There is heavy rainfall in Begaluru. But, in Chitradurga no rain, nothing. Farmers here still looking up towards sky with a humbleness for rain. The continuation of droght over a decade in this district has made the condition worst.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X