ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಹೆದ್ದಾರಿಗೆ ಜಮೀನು ಕೊಟ್ಟರೂ ಈ ಕುಟುಂಬಕ್ಕಿಲ್ಲ ಪರಿಹಾರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 07; ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಮಯದಲ್ಲಿ ರೈತರ ಜಮೀನು ರಸ್ತೆಗೆ ಹಾದು ಹೋಗಿದ್ದರೆ ರೈತರಿಗೆ ಪರಿಹಾರ ನೀಡಬೇಕು ಎನ್ನುವುದು ಸರ್ಕಾರದ ನಿಯಮ. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಬಡ ರೈತನ ಕುಟುಂಬದ ಕಥೆಯೇ ಬೇರೆ.

ಕುಟುಂಬದ 41 ಗುಂಟೆ ಜಮೀನನ್ನು ಹೆದ್ದಾರಿಗಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಕೇವಲ 10 ಗುಂಟೆಗೆ ಪರಿಹಾರ ನೀಡಿದ್ದು, ವಶಪಡಿಸಿಕೊಂಡಿರುವ ಜಮೀನಿಗೆ ತಕ್ಕಂತೆ ಪರಿಹಾರವನ್ನು ನೀಡುವಂತೆ ರೈತ ಕುಟುಂಬ ಒತ್ತಾಯಿಸುತ್ತಿದೆ. ಪರಿಹಾರಕ್ಕೆ ಅಲೆದಾಟ ನಡೆಸಿ ಬಡ ಕುಟುಂಬ ಸುಸ್ತಾಗಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಮೊರೆ ಹೋಗಿದೆ.

ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಈರಮ್ಮ ಕೋಂ ಡೆಕ್ಕಿ ತಿಪ್ಪಯ್ಯ ಎನ್ನುವವರ ಜಮೀನು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಕ್ಕದಲ್ಲಿ ಬರುತ್ತದೆ. ಇದಕ್ಕಾಗಿ ಸರ್ವೇ ನಂಬರ್ 179ರಲ್ಲಿ ಬರುವ 2.20 ಎಕರೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಗಳು 41 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಕೇವಲ 10 ಗುಂಟೆಯ ಪರಿಹಾರ ಮಾತ್ರ ನೀಡಲಾಗಿದೆ.

 National High Way Project Poor Family Demanding For Compensation

ಉಳಿದ ಹಣವನ್ನು ಪರಿಹಾರ ನೀಡುವಂತೆ ಕೇಳಿದರೆ 10 ಗುಂಟೆ ಮಾತ್ರ ಸ್ವಾಧೀನ ಮಾಡಿಕೊಂಡಿದ್ದೇವೆ ಎಂದು ಅಧಿಕಾರಿಗಳು ಸಾಬೂಬು ಹೇಳುತ್ತಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. 22 ಲಕ್ಷ ಪರಿಹಾರ ಸಿಗಬೇಕಿತ್ತು ಆದರೆ ಅಧಿಕಾರಿಗಳ ಎಡವಟ್ಟು ಹಾಗೂ ತಪ್ಪು ಮಾಹಿತಿಯಿಂದ ಕೇವಲ 4.50 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡಲು ಮುಂದಾಗಿದ್ದಾರೆ.

ಉಳಿದ ಜಮೀನನ್ನು ತೋರಿಸಿ ಎಂದರೆ ಇದಕ್ಕೆ ಮಾತ್ರ ಉತ್ತರ ನೀಡುತ್ತಿಲ್ಲ. ಇನ್ನು ಮನೆಯೂ ಕೂಡ ಅರ್ಧ ಭಾಗ ಹೋಗಿದ್ದು, ಅಲ್ಲಿಯೂ ಕೂಡ ವಾಸಿಸಲು ಸಾಧ್ಯವಾಗುತ್ತಿಲ್ಲ. ಮನೆಯ ಪಕ್ಕದಲ್ಲಿರುವ ಬೇರೆ ಮನೆಯವರ ಮನೆಯೇ ಹೋಗದಿದ್ದರೂ ಅವರಿಗೆ ಪರಿಹಾರ ಕೊಡಲಾಗಿದೆ. ಆದರೆ, ನಮ್ಮ ಮನೆ ಅರ್ಧ ಹೋದರೂ ಪರಿಹಾರ ನೀಡಿಲ್ಲ. ಇದರಿಂದ ನಮಗೆ ಅನ್ಯಾಯವಾಗಿದೆ. ಪರಿಹಾರ ಕೇಳಿದರೆ ಕೊಡದೆ ಮುಂದೂಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ನ್ಯಾಯ ಕೊಡಿಸುವಂತೆ ಅನುಸೂಚಿ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗಕ್ಕೆ ದೂರು ನೀಡಿದ್ದು, ಆಯೋಗವೂ ಚಳ್ಳಕೆರೆ ತಹಶೀಲ್ದಾರ್‌ಗೆ, ಪರಿಶೀಲಿಸುವಂತೆ ಸೂಚಿಸಿದ್ದು, ಅವರು ನವೆಂಬರ್ 8 ರಂದು ಜಮೀನಿನ ದಾಖಲೆಗಳ ಸಮೇತ ಕಚೇರಿಗೆ ಬಂದು ಭೇಟಿಯಾಗುವಂತೆ ನೋಟೀಸ್ ನೀಡಿದ್ದಾರೆ.

ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಅಳತೆಯ ಪ್ರಕಾರ ನಮಗೆ ಪರಿಹಾರ ನೀಡಬೇಕು. ಇಲ್ಲವೇ ಜಮೀನು ಬಿಟ್ಟುಕೊಡಬೇಕು ಎಂದು ಈರಮ್ಮ ಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೇಂದ್ರ ಸಚಿವರ ಗಮನಕ್ಕೆ ತಂದರೂ ಏನು ಪ್ರಯೋಜನವಿಲ್ಲ ಎನ್ನುತ್ತಾರೆ ಕುಟುಂಬದ ಸದಸ್ಯರು.

ಕುಟುಂಬ ನ್ಯಾಯಕ್ಕಾಗಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಮೊರೆ ಹೋಗಿದೆ. ಆಯೋಗದಿಂದ ವಿಚಾರಣೆ ನಡೆಸುತ್ತಿದ್ದು, ಪ್ರಸ್ತುತ ಪ್ರಕರಣದ ವಿಚಾರಣೆಯನ್ನು 8/11/2021 ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಸಂಪೂರ್ಣ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರು ಇರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯೋಗದಿಂದ ನೋಟಿಸ್ ನೀಡಲಾಗಿದೆ.

ಇನ್ನೂ ಈ ವಿಚಾರವಾಗಿ ಭೂಸ್ವಾಧೀನ ಅಧಿಕಾರಿ ಬಸವರಾಜ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, "ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ವತಿಯಿಂದ ಮಾಹಿತಿ ಕೇಳಿದ್ದಾರೆ. ಅವರಿಗೆ ಮಾಹಿತಿ ನೀಡಲಾಗಿದೆ, ಈ ಹಿಂದೆ ಇದ್ದ ಅಧಿಕಾರಿಗಳು ಏನು ಮಾಡಿದ್ದಾರೆ? ಎಂಬುದು ಗೊತ್ತಿಲ್ಲ. ದಾಖಲೆಗಳು ಸಿಕ್ಕಿರಲಿಲ್ಲ, ದಾಖಲೆಗಳನ್ನು ಹುಡುಕಿ ಆಯೋಗಕ್ಕೆ ನೀಡಲಾಗಿದೆ" ಎಂದು ಹೇಳಿದರು.

English summary
Poor family from Chitradurga district Challakere taluk demanding for compensation. Family land acquired for national high way project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X