ಹೇಳಿಕೆ ದಾಖಲಿಸಲು ಸಿದ್ಧರಾದ ಸಂತ್ರಸ್ತೆಯರು; ಮುರುಘಾ ಶ್ರೀಗಳಿಗೆ ಬಂಧನ ಭೀತಿ
ಚಿತ್ರದುರ್ಗ, ಆ. 28: ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಸಿರುವ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ ಬೆನ್ನಲ್ಲೇ ಇಬ್ಬರು ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದೊಯ್ಯಲಾಗಿದೆ. ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಇಬ್ಬರು ಶಾಲಾ ಬಾಲಕಿಯರನ್ನು ಒಪ್ಪಿಸಲಾಗಿದೆ.
ಇಬ್ಬರು ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಸೇರಿದಂತೆ ಆರೋಪಿಗಳಿಗೆ ಬಂಧನ ಭೀತಿ ಎದುರಾಗಿದೆ.
ಮುರುಘಾ ಮಠದ ಸ್ವಾಮೀಜಿ ಸೇರಿದಂತೆ ಹಲವರ ವಿರುದ್ಧ ಬಾಲಕಿಯರ ಹೇಳಿಕೆ ಆಧರಿಸಿ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿದ ಬೆನ್ನಲ್ಲೇ ಎಫ್ಐಆರ್ ದಾಖಲಾಗಿತ್ತು. ಸದ್ಯ ಇಲ್ಲಿನ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿರುವ ಮಕ್ಕಳನ್ನು ಭಾನುವಾರ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೇಳಿಕೆ ದಾಖಲಿಸಲಾಗುತ್ತದೆ. ಅ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಮುರುಘಾ ಶ್ರೀಗಳು ಸೇರಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಇತರೆ ಬಾಲಕಿಯರ ಹೇಳಿಕೆ ದಾಖಲು: ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಎಸಗಿ ದೂರು ನೀಡಿರುವ ಶಾಲಾ ಬಾಲಕಿಯರ ಆಪ್ತರು ಒಳಗೊಂಡಂತೆ ಮಠದ ಹಲವು ವಿದ್ಯಾರ್ಥಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಬೆದರಿಕೆ, ಪ್ರಭಾವ: ಇಬ್ಬರ ಶಾಲಾ ಬಾಲಕಿಯರು ಡಾ. ಶಿವಮೂರ್ತಿ ಮುರುಘಾ ಶರಣರು ನೀಡಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಭಾವಿಗಳು ಒಡನಾಡಿ ಸ್ವಯಂ ಸೇವಾ ಸಂಸ್ಥೆಗೆ ಒತ್ತಡ ಹಾಕಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಇದನ್ನು ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಪರುಶುರಾಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಡೆದಿದ್ದಾರೆ.

ಪ್ರಭಾವಿ ಮಠ: ಚಿತ್ರದುರ್ಗದ ಮುರುಘಾ ಶ್ರೀ ಮಠ ರಾಜ್ಯದ ಅತ್ಯಂತ ಪ್ರಭಾವಿ ಮಠಗಳಲ್ಲಿ ಒಂದು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಭಾವಿ ನಾಯಕರೇ ಈ ಮಠಕ್ಕೆ ಹೊಗಿ ಬಂದಿದ್ದರು. ಇತ್ತೀಚೆಗೆ ಅಮಿತ್ ಶಾ ಸಹ ಭೇಟಿ ನೀಡಿ ಗಮನ ಸೆಳೆದಿದ್ದರು. ಇದೀಗ ಮಠದ ಶ್ರೀಗಳು ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಹೊರ ಬಂದಿದ್ದು, ಸ್ವಾಮೀಜಿ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.












Click it and Unblock the Notifications