ಬಿಜೆಪಿಗೆ ಗುಡ್‌ನ್ಯೂಸ್: ಮುನಿಸು ಮರೆತು ಪ್ರಚಾರಕ್ಕಿಳಿದ ಶಾಸಕ ಎಂ.ಚಂದ್ರಪ್ಪ
ಚಿತ್ರದುರ್ಗ, ಏಪ್ರಿಲ್ 03 : ಪುತ್ರನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಸಾರಿದ್ದ ಒಳಕೆರೆ ಶಾಸಕ ಎಂ ಚಂದ್ರಪ್ಪ ಅವರು ಇದೀಗ ಮುನಿಸು ಮರೆತು ಬಿಜೆಪಿ ಅಭ್ಯರ್ಥಿ ಕೈ ಕುಲುಕಿದ್ದಾರೆ.
ಚಿತ್ರದುರ್ಗ ನಗರದಲ್ಲಿರುವ ಶಾಸಕ ಎಂ. ಚಂದ್ರಪ್ಪ ಅವರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳವರು ಭೇಟಿ ನೀಡಿದರು. ಮನೆಯಲ್ಲಿ ತಿಂಡಿ ಸವಿಯುವ ಮೂಲಕ ಮುನಿಸು ಮರೆತು ನಾಯಕರು ಒಂದಾಗಿದ್ದು, ಬಿಜೆಪಿಯ ಬಂಡಾಯ ಶಮನಕ್ಕೆ ಅಂತ್ಯ ಕಂಡಿದೆ.

ಶಾಸಕ ಎಂ ಚಂದ್ರಪ್ಪ ಹಾಗೂ ಪುತ್ರ ರಘುಚಂದ್ರನ್ ಇಬ್ಬರ ಜೊತೆ ಅಭ್ಯರ್ಥಿ ಮಾತನಾಡಿದ್ದಾರೆ. ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಗೆಲುವಿಗೆ ಶ್ರಮಿಸಲು ಅಭ್ಯರ್ಥಿ ಮನವಿ ಮಾಡಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು, ಯುವಕ ರಘುಚಂದನ್ ಆಶಾವಾದಿ, ಈ ಕಾರಣಕ್ಕೆ ಅವರು ಪಕ್ಷಸಂಘಟನೆ, ಹೋರಾಟ ಮಾಡಿಕೊಂಡು ಟಿಕೆಟ್ ನಿರೀಕ್ಷೆ ಯಲ್ಲಿದ್ದರು. ಆದರೆ ಕೇಂದ್ರ ಹಾಗೂ ರಾಜ್ಯ ನಾಯಕರು ಇದೊಂದು ಬಾರಿ ನೀವೇ ನಿಲ್ಲಿ ಅಂದ್ರು, ರಾಷ್ಟ್ರೀಯ ನಾಯಕರ ಒತ್ತಾಯದ ಮೇರೆಗೆ ನಾನು ಓಕೆ ಅಂದೆ.
ನಾನು ಯಾರ ಮಾತನ್ನು ಮೀರುವುದಿಲ್ಲವೋ ಅವರಿಂದ ಹೇಳಿಸಿದರು, ಅದಕ್ಕೆ ನಾನು ಆಯಿತು ಸ್ವಾಮಿ ಅಂದೆ, ಚಂದ್ರಪ್ಪ ನಾನು ಒಂದೇ ತೆಟ್ಟೆಯಲ್ಲಿ ಉಂಡ ಅಣ್ಣ ತಮ್ಮಂದಿರು. ಆವೇಶದಲ್ಲಿ ಮಾತುಗಳು ಹೆಚ್ವು ಕಡಿಮೆ ಆಗಿರುತ್ತದೆ. ಈಗ ಚಂದ್ರಪ್ಪ ಹಾಗೂ ರಘುಚಂದನ್ ನಿಮ್ಮ ಚುನಾವಣೆ ನಮ್ಮದೇ ಜವಾಬ್ದಾರಿ ಅಂದಿದ್ದಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಂಪೂರ್ಣ ಬೆಂಬಲ ಕೊಡ್ತೀನಿ ಎಂದು ಹೇಳಿದ್ದಾರೆ ಎಂದರು.
ಅಬ್ಯರ್ಥಿ ಘೋಷಣೆ ಬಳಿಕ ಬಿಜೆಪಿಯಲ್ಲಿ ಹಿಂದೆದೂ ಇಲ್ಲದ ಅಸಮಾಧಾನ ತಲೆ ಎತ್ತಿತ್ತು. ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ಹಂಚಿಕೆಯ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಒಂದೊಂದೇ ಕ್ಷೇತ್ರದ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ರಾಜ್ಯ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಒಂದು ಹೊರತುಪಡಿಸಿ ಮತ್ತೆಲ್ಲಾ ಕ್ಷೇತ್ರಗಳಲ್ಲಿಯೂ ಅಸಮಧಾನ ಶಮನವಾಗಿದ್ದು, ಬಂಡಾಯ ನಾಯಕರು ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ನಿರ್ಧರಿಸಿದ್ದಾರೆ.












Click it and Unblock the Notifications