ನಾಳೆಯೇ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಕೋಟೆ ನಾಡಿನಲ್ಲಿ ಕೈ ನಾಯಕರ ಶಕ್ತಿ ಪ್ರದರ್ಶನ
ಚಿತ್ರದುರ್ಗ, ಏಪ್ರಿಲ್ 03: ದಿನ ಕಳೆದಂತೆ ಕೋಟೆ ನಾಡು ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರುತ್ತಿದೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಅವರು ಏಪ್ರಿಲ್ 4, ಗುರುವಾರ ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ನೀಲಕಂಠೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಲಕ್ಷಾಂತರ ಬೆಂಬಲಿಗರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರೆಳಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕುರಿತು ಪತ್ರದ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿರುವ ಬಿ.ಎನ್ ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಕಾರ್ಯಕರ್ತರೇ ತಮ್ಮಗಳ ಉಪಸ್ಥಿತಿ ನನಗೆ ಆನೆಬಲ ತಂದುಕೊಡಲಿದೆ ಎಂಬುದು ನನ್ನ ಅಚಲ ನಂಬಿಕೆಯಾಗಿದೆ. ಆದ್ದರಿಂದ ತಾವುಗಳು ತಮ್ಮ ಸ್ನೇಹಿತರ ಜೊತೆ ನಾಮಪತ್ರ ಸಲ್ಲಿಕೆ ಸಂದರ್ಭ ನನ್ನೊಂದಿಗೆ ಇರಬೇಕೆಂಬುದು ನನ್ನ ಮಹದಾಸೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪರ ಬಹುದೊಡ್ಡ ಅಲೆ ಬೀಸುತ್ತಿರುವ ಸಂದರ್ಭ ನಿಮ್ಮಗಳ ಪ್ರೀತಿ, ಅಭಿಮಾನದ ಫಲ ನನ್ನನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಣೆ ಮಾಡಿದೆ. ಇದು ನನ್ನ ಸೌಭಾಗ್ಯ ಎಂದು ಮೂರನೇ ಬಾರಿಗೆ ಟಿಕೆಟ್ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಿದ್ದೆಗೆಡಿಸಿದ ಗ್ಯಾರಂಟಿ ಯೋಜನೆಗಳು
ದೇಶದಲ್ಲಿಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಾದರಿ ಆಗಿವೆ. ಟೀಕೆ ಮಾಡಿದವರೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಉತ್ಸಾಹ ತೋರುತ್ತಿದ್ದಾರೆ. ಅಷ್ಟರಮಟ್ಟಿಗೆ ಬಡವರ ಪರ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ದೇಶದ ಜನರ ಮೆಚ್ಚುಗೆ ಗಳಿಸಿವೆ. ಪ್ರತಿಪಕ್ಷಗಳ ನಿದ್ದೆಗೆಡಿಸಿವೆ ಎಂದು ಬಿ.ಎನ್ ಚಂದ್ರಪ್ಪ ತಿಳಿಸಿದ್ದಾರೆ
ಗೃಹಲಕ್ಷ್ಮೀ, ಗೃಹಜ್ಯೋತಿ, ಸ್ತ್ರೀಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಜೊತೆಗೆ ಹಸಿದವರು, ಶ್ರಮಿಕರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಹೀಗೆ ಅನೇಕ ಕಾರ್ಯಕ್ರಮಗಳು ಜನರ ಮನಗೆದ್ದಿವೆ ಎಂದಿದ್ದಾರೆ .

ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಆಡಳಿತ ಅಗತ್ಯ ಎಂಬ ವಾತಾವರಣ ನಿರ್ಮಾಣ ಆಗಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂಬ ಜನರ ಇಚ್ಛೆ ದಟ್ಟವಾಗಿರುವ ಸಂದರ್ಭ ನನ್ನನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಣೆ ಮಾಡಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಸಿಎಂ, ಡಿಸಿಎಂ ಭಾಗಿ
ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ, ಸಚಿವ ಕೆ.ಹೆಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕರಾದ ಟಿ ರಘುಮೂರ್ತಿ, ಬಿಜಿ ಗೋವಿಂದಪ್ಪ, ಎನ್ ವೈ ಗೋಪಾಲಕೃಷ್ಣ, ಮಾಜಿ ಸಚಿವ ಹೆಚ್. ಆಂಜನೇಯ ಮಾಜಿ ಶಾಸಕರು, ಹಿರಿಯ ಮುಖಂಡರು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಕ್ಷೇತ್ರದ ಮತದಾರರಾದ ತಾವು ಹಾಗೂ ಪಕ್ಷದ ನಿಷ್ಟಾವಂತರಾದ ತಮ್ಮಗಳ ಉಪಸ್ಥಿತಿ ನನಗೆ ವೈಯಕ್ತಿಕವಾಗಿ ಹೆಚ್ಚು ಸಂತಸ ತರಲಿದೆ. ಆದ್ದರಿಂದ ಅಂದು ನಿಮ್ಮಗಳ ಆಗಮನ, ಉಪಸ್ಥಿತಿಯತ್ತವೇ ನನ್ನ ಗಮನ ಇರಲಿದೆ. ಅಂದು ನೀವು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಹಾರೈಸುತ್ತೀರಾ ಎಂಬ ನಂಬಿಕೆ ನನ್ನಲಿದೆ ಎಂದು ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications