ಜೈಲಿನಿಂದ ತಪ್ಪಿಸಿಕೊಂಡು ಹೋದವನು ಎಲ್ಲಿದ್ದ?
ಚಿತ್ರದುರ್ಗ, ಮೇ 25 : ಸಂದರ್ಶಕರಿಗೆ ಕೊಡುವ ಅನುಮತಿ ಪತ್ರಕ್ಕೆ ನಕಲಿ ಸೀಲ್ ಹಾಕಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿ ಮಂಜುನಾಥ್‌ನನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಕೈದಿಯನ್ನು ಜೈಲಿನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ತಾಲೂಕಿನ ಗೂಳಯ್ಯನ ಹಟ್ಟಿಯ ನಿವಾಸಿ ಮಂಜುನಾಥ್ (32) 2015 ರ ಏಪ್ರಿಲ್ 10ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ. ಸುಮಾರು ಒಂದೂವರೆ ತಿಂಗಳ ಬಳಿಕ ಹುಟ್ಟೂರಿನಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. [ಜೈಲಿನ ಹೆಬ್ಬಾಗಿಲಿನಿಂದಲೇ ಕೈದಿ ಪರಾರಿ]

ಮಂಜುನಾಥ್ ಗೂಳಯ್ಯನ ಹಟ್ಟಿಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಶನಿವಾರ ರಾತ್ರಿ ದಾಳಿ ನಡೆಸಿದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿಸುವ ವೇಳೆ ಪೊಲೀಸ್ ಪೇದೆಗಳ ಮೇಲೆ ಚಾಕುವಿನಿಂದ ಆತ ಹಲ್ಲೆ ಮಾಡಿದ್ದು, ಇಬ್ಬರು ಪೇದೆಗಳ ಕೈಗೆ ಗಾಯವಾಗಿದೆ. [ಚಿತ್ರದುರ್ಗ : ಹೃದಯಾಘಾತದಿಂದ ಎಸ್ ಐ ಸಾವು]
ಮಂಜುನಾಥ್‌ನನ್ನು ಭಾನುವಾರ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಜೈಲಿನಿಂದ ಪರಾರಿಯಾದ ಮಂಜುನಾಥ್ ಕೆಲವು ದಿನ ಬೆಂಗಳೂರಿನಲ್ಲಿರುವ ತಂಗಿಯ ಮನೆಯಲ್ಲಿ ಆಶ್ರಮ ಪಡೆದಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಕೈದಿಗೆ ಆಶ್ರಯ ನೀಡಿದ್ದಕ್ಕಾಗಿ ಮಂಜುನಾಥ್ ತಂಗಿ ಮತ್ತು ಆಕೆಯ ಪತಿಯ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಖ್ಯದ್ವಾರದಿಂದಲೇ ಹೋಗಿದ್ದ : ಮಂಜುನಾಥ್ ಸಂದರ್ಶಕರಿಗೆ ಕೊಡುವ ಅನುಮತಿ ಪತ್ರ ಪಡೆದು ಜೈಲಿನ ಮುಖ್ಯಪ್ರವೇಶ ದ್ವಾರದ ಮೂಲಕವೇ ಓಡಿ ಹೋಗಿದ್ದ. ಜೈಲಿನ ಸಿಬ್ಬಂದಿ ತಡೆದಾಗ ಪೆರೋಲ್ ಅವಧಿ ಪೂರ್ಣಗೊಳ್ಳಲು ಒಂದು ವಾರ ಬಾಕಿ ಇತ್ತು. ಅದನ್ನು ವಿಸ್ತರಿಸಿಕೊಂಡು ಹೋಗಲು ಬಂದಿದ್ದೆ ಎಂದು ಕಥೆ ಹೇಳಿದ್ದ.












Click it and Unblock the Notifications