ಚಿತ್ರದುರ್ಗ; ಗಾಯತ್ರಿ ಜಲಾಶಯ ಎಂದು ಹೆಸರು ಬಂದಿದ್ದು ಹೇಗೆ?
ಚಿತ್ರದುರ್ಗ, ಜನವರಿ 10; ಕರ್ನಾಟಕದ ಚಿಕ್ಕ ಜಲಾಶಯಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ಗಾಯತ್ರಿ ಜಲಾಶಯವೂ ಒಂದು. ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಶಿರಾ ತಾಲೂಕಿನ ಗಡಿ ಭಾಗದಲ್ಲಿ ಹಸಿರು ಕಣಿವೆಯ ಗುಡ್ಡಗಳ ಸುಂದರ ಪರಿಸರದಲ್ಲಿ ಗಾಯತ್ರಿ ಜಲಾಶಯವಿದೆ. ಈ ಜಲಾಶಯ 0.97 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ, ಬೆಳ್ಳಾರ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆಯ ವ್ಯಾಪ್ತಿಯಲ್ಲಿ ಮೈದಾನ ಪ್ರದೇಶಗಳಲ್ಲಿ ಹರಿದು ಬರುವ ಸುವರ್ಣಮುಖಿ ನದಿಯು ಗಾಯತ್ರಿ ಜಲಾಶಯದ ನೀರಿನ ಮೂಲವಾಗಿದೆ. 1963ರಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುವರ್ಣಮುಖಿ ನದಿಗೆ ಅಡ್ಡಲಾಗಿ ಅತಿ ಕಡಿಮೆ ವೆಚ್ಚ ಅಂದರೆ 40 ಲಕ್ಷ ರೂಪಾಯಿ ಖರ್ಚು ಮಾಡಿ ಈ ಜಲಾಶಯ ನಿರ್ಮಾಣ ಮಾಡಲಾಗಿದೆ.
ಗಾರೆ ಮತ್ತು ಸಿಮೆಂಟ್ ಬಳಸಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವಕೀಲ ಕೆ. ಕೆಂಚಪ್ಪ ಜಯಚಾಮರಾಜ ಒಡೆಯರ್ ಆಹ್ವಾನಿಸಿ ಜಲಾಶಯಕ್ಕೆ ಅಡಿಗಲ್ಲು ಹಾಕಿಸಿದ್ದರು. ಈ ಡ್ಯಾಂ ಅನ್ನು ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣುಮಗಳಾದ ಗಾಯತ್ರಿದೇವಿ ನೆನೆಪಿಗಾಗಿ ನಿರ್ಮಾಣ ಮಾಡಿ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.

ಈ ಒಂದು ಜಲಾಶಯ ಸುಮಾರು 7 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದೆ. ಇನ್ನು 16 ಕಿಲೋಮೀಟರ್ ಉದ್ದದ ಬಲನಾಲೆ ಹಾಗೂ 7 ಕಿ. ಮೀ. ಉದ್ದದ ಎಡನಾಲೆ ಎಂಬ ಎರಡು ನಾಲೆಗಳಿವೆ. ಎರಡು ಕಾಲುವೆಗಳ ಮೂಲಕ 0.67 ಟಿಎಂಸಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತದೆ.
ಜಲಾಶಯದ ನೀರು ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಗೆ ಸೀಮಿತಗೊಳ್ಳದೇ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆ ಕೋಟೆ ಮತ್ತಿತರರ ಗ್ರಾಮದ ರೈತರ ಜಮೀನುಗಳಿಗೆ ಹರಿಯುತ್ತದೆ. ಜಲಾಶಯ ಒಮ್ಮೆ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ.

ಗಾಯತ್ರಿ ಜಲಾಶಯದ ಒಟ್ಟು ಉದ್ದ 1021.53 ಮೀಟರ್, 9.55 ದಶಲಕ್ಷ ಘನ ಮೀಟರ್ ಹಾಗೂ ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನ ಮೀಟರ್ ( 0.97 ಟಿಎಂಸಿ) ಇದ್ದು ಇದರಲ್ಲಿ ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನ ಮೀಟರ್ (0.34 ಟಿಎಂಸಿ) ಮತ್ತು ಉಪಯುಕ್ತ ಸಂಗ್ರಹಣ ಸಾಮರ್ಥ್ಯ 18.08 ದಶಲಕ್ಷ ಘನ ಮೀಟರ್ 0.63 ಟಿಎಂಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1031.00 ಕಿ. ಮೀ. ಇದ್ದು, ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.
4 ವರ್ಷಗಳ ಬಳಿಕ ಕೋಡಿ : ಗಾಯತ್ರಿ ಜಲಾಶಯವು 2017ರ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಎರಡು ಬಾರಿ ಕೋಡಿ ಬಿದ್ದಿತ್ತು. ತದನಂತರ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರಲು ಸಾಧ್ಯವಾಗಲಿಲ್ಲ. ಡ್ಯಾಂನಲ್ಲಿ ನೀರು ಇಲ್ಲದೆ ದಿನ ಕಳೆದಂತೆ ಜಲಾಶಯ ಬತ್ತಿ ಹೋಗಿತ್ತು.
ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ನಾಲ್ಕು ವರ್ಷಗಳ ನಂತರ 2021 ನವೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಮೈದುಂಬಿ ಕೊಡಿ ಬಿದ್ದಿತು. ಇದರಿಂದ ಡ್ಯಾಂ ಸುತ್ತಮುತ್ತಲಿನ ರೈತಾಪಿ ವರ್ಗದ ಕೃಷಿ ಚಟುವಟಿಕೆಗಳಿಗೆ ತುಂಬಾ ಅನುಕೂಲಕರವಾಗಿದೆ.
ಜಲಾಶಯ ಅಭಿವೃದ್ಧಿಗೆ 12.5 ಕೋಟಿ ಅನುದಾನ : ಗಾಯತ್ರಿ ಜಲಾಶಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರಿಯ ವಾಟರ್ ಕಮಿಷನ್ ಮತ್ತು ವಿಶ್ವಬ್ಯಾಂಕ್ ನೆರವಿನೊಂದಿಗೆ ಗಾಯತ್ರಿ ಜಲಾಶಯಕ್ಕೆ 12.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಹಿರಿಯೂರು ತಾಲೂಕಿನ ಮತ್ತೊಂದು ಜಲಾಶವಾದ ವಾಣಿ ವಿಲಾಸ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಬೇಕು ಎಂಬುದು ಆ ಭಾಗದ ಜನರ ಒತ್ತಾಯವಾಗಿದೆ. ಕಲ್ಲುವಳ್ಳಿ ಭಾಗ ಎಂದೇ ಕರೆಯಲ್ಪಡುವ ಜವಗೊಂಡನಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದೆ. ಈ ಹಿನ್ನಲೆಯಲ್ಲಿ ವಿವಿ ಸಾಗರ ಡ್ಯಾಂನಿಂದ ಗಾಯತ್ರಿ ಜಲಾಶಯಕ್ಕೆ ನೀರು ಹರಿಸಿ ಹೋಬಳಿಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು ಕೊಡಿ ಎಂಬ ಮಾತುಗಳು ಕೇಳಿ ಬರುತ್ತಿವೆ.











Click it and Unblock the Notifications