ಕಾಡುಗೊಲ್ಲರ ಕಣಜ ಸಿರಿಯಮ್ಮಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಚಿತ್ರದುರ್ಗ, ನವೆಂಬರ್ 06: ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯ ಒಂದಾಗಿದೆ. ಈ ಸಮುದಾಯದಲ್ಲಿ ತನ್ನದೇ ಆದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಈ ಸಮುದಾಯದಲ್ಲಿ ಜಾನಪದ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ಚಳ್ಳಕೆರೆಯ ನಾಡೋಜ ಪುರಸ್ಕೃತ ಸಿರಿಯಮ್ಮಗೆ 2023ನೇ ಸಾಲಿನ 'ಜಾನಪದ ಅಕಾಡೆಮಿ ಪ್ರಶಸ್ತಿ' ಲಭಿಸಿದೆ.
ಸಿರಿಯಮ್ಮ ಅನಕ್ಷರಸ್ಥರಾದ ಸಹ ಜಾನಪದ ಹಾಡುಗಳನ್ನು ಪೋಣಿಸುವುದಲ್ಲಿ ಎತ್ತಿದ ಕೈ. ಸಾವಿರಾರು ಪದಗಳನ್ನು ತನ್ನ ಜ್ಞಾನ ಭಂಡಾರದಲ್ಲಿಟ್ಟುಕ್ಕೊಂಡು ಈ ಹಿರಿಯ ಕಲಾವಿದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮುದಾಯದ ಸಾಂಸ್ಕೃತಿಕ ವೀರ ನಾಯಕರಾದ ಎತ್ತಪ್ಪ, ಜುಂಜಪ್ಪ, ಚಿಕ್ಕಣ್ಣ, ಕ್ಯಾತಪ್ಪ, ಕದರಿ ನರಸಿಂಹ ಹಾಗೂ ರಂಗಪ್ಪನ ರಂಗಪ್ಪನ ಮಹಾಕಾವ್ಯಗಳನ್ನು ಪಟಪಟನೇ ಸಾಸಿವೆ ಕಾಳು ಸಿಡಿದಂತೆ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎಲಗಟ್ಟೆ ಗ್ರಾಮದ ಸಿರಿಯಮ್ಮ ಅನಕ್ಷರಸ್ಥರು. ಆದರೂ ಸಹ ಅವರು ಅಜ್ಜಿ ಮತ್ತು ತಾಯಿಯಿಂದ ಕಲಿತುಕೊಂಡು ಚಿಕ್ಕಂದಿನಿಂದಲೂ ಹಾಡುವುದನ್ನು ಆರಂಬಿಸಿದರು. ಜಾನಪದ ಕಣಜ, ಜಾನಪದ ಸರಸ್ವತಿ ಎಂದು ನಾಡಿನಾದ್ಯಂತ ಗುರುತಿಸಿಕೊಂಡಿದ್ದಾರೆ. ಸಿರಿಯಜ್ಜಿಯ ನಂತರ ಈಗಿನ ಕಾಡುಗೊಲ್ಲರ ಹೆಣ್ಣು ಮಕ್ಕಳಿಗೆ ಹಾಡುಗಳನ್ನು ಕಲಿಸುವ ಮೂಲಕ ಜಾನಪದವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರಶಸ್ತಿ ಕುರಿತು ಮಾತನಾಡಿರುವ ಸಿರಿಯಮ್ಮ ಅವರು, 'ಅನಕ್ಷರಸ್ಥೆಯಾದ ನನಗೆ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ವಯಸ್ಸು ಆಯಿತು. ಆರೋಗ್ಯ ಸರಿಯಿಲ್ಲ. ನಾನು ಕಲಿತಿರುವ ಪದಗಳನ್ನು ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳಿಗೆ ಕಲಿಸೋಣ ಅಂದ್ರೆ ಈಗಿನ ಹೆಣ್ಣು ಮಕ್ಕಳು ಕಲಿಯುವ ಹಾಡುಗಳ ಕಡೆ ಆಸಕ್ತಿ ತೋರುತ್ತಿಲ್ಲ. ಪ್ರಶಸ್ತಿಗೆ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಕಾಡುಗೊಲ್ಲ ಸಮುದಾಯ ಜಾನಪದ ಹಿರಿಯ ಸೋಬಾನೆ ಕಲಾವಿದೆಯನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸಮುದಾಯದ ಚಿಂತಕರು, ಸಾಹಿತಿಗಳು, ಕಲಾವಿದರು, ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications