ಬಡಗೊಲ್ಲರಹಟ್ಟಿಯಲ್ಲಿ ಋತುಮತಿ ಮಹಿಳೆಯರನ್ನು ಮನೆಗೆ ಸೇರಿಸಿದ ಶಾಸಕಿ ಕೆ. ಪೂರ್ಣಿಮಾ
ಋತುಮತಿಯಾಗಿ ಮನೆಯಿಂದ ಹೊರಗಡೆ ಇಟ್ಟಿದ್ದ ಮಹಿಳೆಯರನ್ನು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಮನೆಯೊಳಗೆ ಸೇರಿಸಿ ಮೂಢನಂಬಿಕೆಗಳ ಪದ್ದತಿಗೆ ಇತಿಶ್ರೀ ಹಾಡಿದ್ದಾರೆ. ಹಾಗೆಯೇ ಮೂಢನಂಬಿಕೆಗಳಿಗೆ ತೆರೆ ಎಳೆಯಲು ಶಾಸಕಿ ಜನರ ಮನವೊಲಿಸಿದ್ದೇಗೆ ಅನ್ನುವ ವಿವರ ಇಲ್ಲಿದೆ.
ಚಿತ್ರದುರ್ಗ, ಫೆಬ್ರವರಿ, 08: ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಲ್ಲಿ ಆಚಾರ-ವಿಚಾರಗಳು ಇನ್ನು ಜೀವಂತವಾಗಿವೆ. ಋತುಮತಿಯಾಗಿ ಮನೆಯಿಂದ ಹೊರಗಡೆ ಇಟ್ಟಿದ್ದ ಮಹಿಳೆಯರನ್ನು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಮನೆಯೊಳಗೆ ಸೇರಿಸಿ ಮೂಢನಂಬಿಕೆಗಳ ಪದ್ದತಿಗೆ ಇತಿಶ್ರೀ ಹಾಡಿದ ಘಟನೆ ಹುಳಿಯಾರು ರಸ್ತೆಯಲ್ಲಿರುವ ಬಡಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹುಳಿಯಾರು ರಸ್ತೆಯಲ್ಲಿರುವ ಬಡಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಹಾಗೆಯೇ ಗೊಲ್ಲರಹಟ್ಟಿಗಳಲ್ಲಿರುವ ಹೆಣ್ಣು ಮಕ್ಕಳ ಕೆಲವು ಮೂಢನಂಬಿಕೆ ಪದ್ಧತಿಗಳಿಗೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ತಿಲಾಂಜಲಿ ಇಟ್ಟಿದ್ದಾರೆ. ತಾಲೂಕಿನ ಯಲ್ಲದಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ ಅವರು ಗ್ರಾಮಸ್ಥರ ಮನವಿ ಮೇರೆಗೆ ಬಡಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು. ಎಲ್ಲಾ ಹೆಣ್ಣು ಮಕ್ಕಳು 10ನೇ ತರಗತಿಗೆ ಮೊಟಕುಗೊಳಿಸಿರುವ ಬಗ್ಗೆ ವಿಚಾರಿಸಿದಾಗ ಪ್ರತಿ ತಿಂಗಳಿಗೊಮ್ಮೆ ಹೆಣ್ಣು ಮಕ್ಕಳು ಮುಟ್ಟು ಆಗುವುದರಿಂದ ಶಾಲೆ ಮುಂದುವರೆಸಲು ಆಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗೊಲ್ಲರಹಟ್ಟಿಗಳಲ್ಲಿ ಮೂಢನಂಬಿಕೆ ಪದ್ಧತಿ
ಈ ಪದ್ಧತಿಯನ್ನು ಅನೇಕ ಗೊಲ್ಲರಹಟ್ಟಿಗಳಲ್ಲಿ ಮತ್ತು ಇದೆ ಗ್ರಾಮದಲ್ಲಿ ಕೆಲವರು ಅನುಸರಿಸುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿ ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸಹ ಶಾಸಕರಿಗೆ ಸಹಮತಿ ನೀಡಿ ಊರಿನ ಹೊರಗಿದ್ದ ಹೆಣ್ಣು ಮಕ್ಕಳನ್ನು ಕರೆದು ನೀರು ಹಾಕಿ ಒಳಗಡೆ ಕರೆ ತರುವ ಮೂಲಕ ಶತಮಾನಗಳ ಮೂಢನಂಬಿಕೆ ಪದ್ಧತಿಗಳಿಗೆ ಶಾಸಕರು ತಿಲಾಂಜಲಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹೆಣ್ಣು ಮಕ್ಕಳ ಸಂತೋಷ ಮುಗಿಲು ಮುಟ್ಟಿತ್ತು. ನಂತರ ಇದರಿಂದ ಸಂತೋಷಗೊಂಡ ಗ್ರಾಮಸ್ಥರು ಶಾಸಕರಿಗೆ ಧನ್ಯವಾದ ಹೇಳಿದರು.

ಹಿಂದೆ ಗೊಲ್ಲರಹಟ್ಟಿಯಲ್ಲಿ ಜಾಗೃತಿ
ನಾಲ್ಕೈದು ವರ್ಷಗಳ ಹಿಂದೆ ಈ ಬಡಗೊಲ್ಲರಹಟ್ಟಿ ಗ್ರಾಮದಲ್ಲಿ ಪತ್ರಕರ್ತ ಚಿದಾನಂದ್ ಮಸ್ಕಲ್, ವಕೀಲ ಶಿವು ಯಾದವ್, ನವೀನ್ ಕುಮಾರ್, ಮಂಜು ಸೇರಿದಂತೆ ಇತರ ತಂಡ ಈ ಗ್ರಾಮದಲ್ಲಿ ಕಾಡುಗೊಲ್ಲ ಯುವಕರ ನಡೆ ಗೊಲ್ಲರಹಟ್ಟಿಯ ಕಡೆ ಎಂಬ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಆಚಾರ ವಿಚಾರಗಳು, ನಂಬಿಕೆಗಳು ಇಂತಹ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಿ, ಅಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪೆನ್ನು ವಿತರಣೆ ಮಾಡಿ ಕಾರ್ಯಕ್ರಮ ಮಾಡಿದ್ದರು.
ಮೌಢ್ಯತೆಯ ಪದ್ಧತಿಗಳನ್ನು ಕೈಬಿಡಬೇಕು
ನಂತರ ಮೂಢನಂಬಿಕೆಗಳ ಪದ್ದತಿ ಬಿಟ್ಟು ಬದಲಾಗಬೇಕು ಎಂದು ಕರೆ ನೀಡಿದ್ದರು. ಇದಾದ ಬಳಿಕ ಜಾಗೃತಿಯ ತಂಡ ಋತುಮತಿಯಾದ ಹೆಣ್ಣು ಮಕ್ಕಳ ಜೊತೆಗೆ ಮಾತಾನಾಡಿ, ಅವರೊಂದಿಗೆ ಬೆರೆತು ದೇವಸ್ಥಾನ ಪ್ರವೇಶ ಮಾಡಿ ಒಂದೊಳ್ಳೆ ಸಂದೇಶ ಸಾರಿತು. ಅಲ್ಲದೇ ಇಂತಹ ಮೌಢ್ಯತೆಯ ಪದ್ಧತಿಗಳನ್ನು ಕೈಬಿಡಬೇಕು ಎಂದು ಗ್ರಾಮದ ಹಿರಿಯರಿಗೆ ತಿಳಿಹೇಳಿದ್ದರು. ಇದೀಗ ಶಾಸಕರು ಕೂಡ ಇಂತಹ ಕಾರ್ಯಕ್ರಮಕ್ಕೆ ತಿಲಾಂಜಲಿ ಇಡುತ್ತಿರುವುದು ಸಂತೋಷದ ಸಂಗತಿಯಾಗಿದೆ.












Click it and Unblock the Notifications