• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಪ ವಿಮೋಚನೆಗೆ ಕಾದಿರುವ ದುರ್ಗದ ಬಂಡೆಗಳು

By ಡಾ|| ಲೋಕೇಶ್ ಅಗಸಕಟ್ಟೆ
|

ಏಳು ಸುತ್ತಿನ ಕೋಟೆಯ ಖ್ಯಾತಿಯ, ಒನಕೆ ಬೀಸಿ ಹೈದರನ ಸಿಪಾಯಿಗಳ ಕೊಂದ ಓಬವ್ವ, ಮದಕರಿಯ ವೀರಾವೇಶದ ಗತಕಾಲದ ಚರಿತ್ರೆಯ ಹ್ಯಾಂಗೋವರ್‍ನಲ್ಲಿಯೇ ಸದಾ ತೇಲುಗಣ್ಣು ಮೇಲುಗಣ್ಣು ಮಾಡಿಕೊಂಡು ಕುಡಿವ ನೀರಿಗೆ ಅತ್ತ ಒಂದು ಕಣ್ಣನ್ನು ಹಿರಿಯೂರಿನ ವಾಣಿ ವಿಲಾಸ ಸಾಗರದತ್ತಲೂ ಇನ್ನೊಂದನ್ನು ಸೂಳೆಕೆರೆಯ ಕಡೆಯೂ ಹೊರಳಾಡಿಸುತ್ತಾ ಅರ್ಧಂಬರ್ಧ ಜೀವ ಹಿಡಿದು ಕುಂತಿರುವ ದುರ್ಗವೆಂಬ ಚಿತ್ರದುರ್ಗ ಈಗ ಲೋಕಸಭಾ ಚುನಾವಣೆಯ ಬಿಸಿಗೆ ಮೈಗೊಡವಿಕೊಂಡು ಎದ್ದು ನಿಂತಿದೆ.

ಅಂದಕಾಲತ್ತಿನಿಂದಲೂ ರಾಮನಿಗೆ ಕಾದ ಶಬರಿಯಂತೆ ಯಾರಾದರೂ ಪುಣ್ಯಾತ್ಮ ಬಂದು ಬರಗಾಲದ ದವಡೆಯಿಂದ ತನ್ನ ಪಾರು ಮಾಡಿಯಾನೇ ಎಂದು ಕಾಯುತ್ತಲೇ ಬಿಸಿಲಿಗೆ ಕೆಂಡವಾದದ್ದು ಬಂತೇ ವಿನಾ ಯಾರೊಬ್ಬರ ಸ್ಪರ್ಶದಿಂದ ತಾನು ಪುನೀತನಾಗಲೇ ಇಲ್ಲ. ನಿಜಲಿಂಗಪ್ಪನಂಥವರಿಂದ ಆರಂಭಗೊಂಡ ರಾಜಕೀಯ ನಾಯಕರ ಯಾತ್ರೆ ಜಾಫರ್‍ಷರೀಪರಿಂದ, ಹನುಮಂತಪ್ಪರನ್ನು ದಾಟಿಕೊಂಡು ಈಗ ಜನಾರ್ದನ ಸ್ವಾಮಿಯೆಂಬ ಕಂಪ್ಯೂಟರ್ ವಿಜ್ಞಾನಿಗೆ ಬಂದು ನಿಂತುಕೊಂಡಿದೆ.

ನೀರು, ರೈಲು, ರಸ್ತೆ, ಶಿಕ್ಷಣ, ಉದ್ಯೋಗ, ಇವು ಚಿತ್ರದುರ್ಗ ಜಿಲ್ಲೆಯ ಅನುಗಾಲದ ಬೇಡಿಕೆಗಳು. ಎಲ್ಲ ಸಂಸದರೂ ನೀರಿನ ಜೊತೆ ಎಳ್ಳನ್ನು, ಹಳಿ ಇಲ್ಲದ ರೈಲನ್ನು ಬಿಟ್ಟರು. ವಾಜಪೇಯಿ ಕೃಪೆಯಿಂದ ಚತುರ್ಪಥ ರಸ್ತೆ ದುರ್ಗದ ಹೃದಯದ ಮೇಲೆ ಹಾದು ಹೋದದ್ದನ್ನು ಬಿಟ್ಟರೆ ಬೇರೆ ಇನ್ನೆನಾಗಿದೆ? ಊರ ತುಂಬಾ ಬಾಯ್ತೆರೆದುಕೊಂಡ ಬೀದಿಗಳು, ಮ್ಯಾನ್‍ಹೋಲ್‍ಗಳು, ನೀರಿಲ್ಲದ ನಲ್ಲಿಗಳು, ಧೂಳು ತೂರುತ್ತಿರುವ ಗಣಿ ಲಾರಿಗಳು, ನೋಡು ನೋಡುತ್ತಲೆ ಗಣಿಗಾರಿಕೆ ಮಾಡಿ ಮೇಲೇರಿದವರು ಕೆಲವರು, ಕೆಳಗೆ ಬಿದ್ದವರು ನೂರಾರು, ಊರವರಿಗೆ ಧೂಳಿನ ಸ್ನಾನ ಬಿಟ್ಟರೆ ಇನ್ನೇನೂ ಇಲ್ಲ. ಸಾಕಪ್ಪಾ ಸಾಕು ಎನ್ನುವಾಗ ಬಂದೇ ಬಿಟ್ಟದೆ ಲೋಕಸಭಾ ಚುನಾವಣೆ.


ಕಂಪ್ಯೂಟರ್ ತಜ್ಞ, ಅಭಿವೃದ್ಧಿಯ ಹರಿಕಾರನೆಂದು ಕರೆದುಕೊಳ್ಳುವ ಹಾಲಿ ಸಂಸದ ಬಿ.ಜೆ.ಪಿ.ಯ ಜನಾರ್ದನ ಸ್ವಾಮಿ, ವಿಧಾನಸೌಧದಲ್ಲಿ ಅಂಗಿಬಿಚ್ಚಿ ಹಾರಾಡಿದ ಖ್ಯಾತಿಯ ಗೂಳಿಹಟ್ಟಿ ಶೇಖರ್ (ಜೆ.ಡಿ.ಎಸ್.), ಮೂಡಿಗೆರೆ ಕಡೆಯಿಂದ ವಲಸೆ ಬಂದು ಕಾಂಗ್ರೆಸ್‍ನಿಂದ ನಿಂತಿರುವ ಚಂದ್ರಪ್ಪ, ತ್ರಿಕೋನ ಸ್ವರ್ಧೆಯ ಕ್ಷೇತ್ರ ರಣಾಂಗಣವಂತೂ ಆಗಿಲ್ಲ. ಜನ ಮೂಕಪ್ರೇಕ್ಷಕರಾಗಿ ಈ ಮೀಸಲು ಕ್ಷೇತ್ರವನ್ನು ಅಳೆದುತೂಗಿ ನೋಡುತ್ತಿದ್ದಾರೆ. ಯಾರು ಬಂದರೂ ಅಷ್ಟೆ -ಎಂಬ ನಿರಾಸಕ್ತಿಯ ಭಾವ ಕ್ಷೇತ್ರದ ತುಂಬಾ ಮನೆ ಮಾಡಿದೆ.

'ನೀರು ಕೊಡರಯ್ಯ' ಎಂದು ಜನ ಅಂಗಲಾಚುತ್ತಾರೆ. ಕುದಾಪುರ ಅರಣ್ಯದ ಸಾವಿರಾರು ಎಕರೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದ್ದೇ ಜನಾರ್ದನ ಸ್ವಾಮಿಯವರದ್ದೊಂದು ದೊಡ್ಡ ಸಾಧನೆಯಾದರೆ, ಕುರಿ, ಕೋಣ, ಮೇಕೆಗಳ ಮೇಯುದಾಣವನ್ನು ಕಿತ್ತುಕೊಂಡರೆಂಬ ಆಕ್ರೋಶ ಆ ಭಾಗದಲ್ಲಿ. 'ಅಭಿವೃದ್ಧಿಯ ವಿಚಾರದಲ್ಲಿ ಇದು ಅನಿವಾರ್ಯ' ಎಂದರೆ - ಅದು ಯಾರಿಗೂ ಅರ್ಥವಾಗುತ್ತಿಲ್ಲವಲ್ಲಾ ಎಂದು ಜನಾರ್ದನ ಸ್ವಾಮಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ಬಾರಿ ಗೆದ್ದರೆ ಪ್ರವಾಸೋದ್ಯಮದ ಮುಖೇನ ದುರ್ಗವನ್ನು ನಂದನವನವನ್ನಾಗಿಸುತ್ತೇನೆ ಎನ್ನುತ್ತಾರೆ. ಹಿಂಬಾಲಕರು ತಲೆ ಅಡಿಸಿದರೆ ಉಳಿದವರು ನಗೆಯಾಡುತ್ತಾರೆ.

"ನಾನು ಗೆದ್ದು ಬಂದರೆ ಕುದಾಪುರ ಅರಣ್ಯ ಖಾಲಿ ಮಾಡಿಸುತ್ತೇನೆ. ಇದು ನನ್ನ ಏಕೈಕ ಹೋರಾಟ" ಎಂದು ಅಂಗಿಯ ಬಟನ್‍ಗೆ ಕೈಹಾಕಿ ಗೂಳಿಹಟ್ಟಿ ಶೇಖರ್ ಮಾತನಾಡುತ್ತಾರೆ. ಕ್ರೀಡಾ ಸಚಿವನಾಗಿದ್ದಾಗ ದುರ್ಗಕ್ಕೆ ಆತ ಮಾಡಿದ ಕೆಲಸ ಜನರ ನೆನಪಿನಲ್ಲಿದೆ. ಅದು ಚೆಂಡು, ಬ್ಯಾಟು, ಓಡುವವರ ಕೃತಜ್ಞತೆಯ ಮಾತು ಉಳಿದ ಶ್ರೀಸಾಮಾನ್ಯರಿಗೇನು ಬಂತು.

ಚಂದ್ರಪ್ಪನೆಂಬ ಮಲಸಿಗರ ಮಾತೇ ವಿಚಿತ್ರ. 'ನಾನು ಗಂಡನ ಮನೆಗೆ ಬಂದಿರುವೆ ಇದನ್ನು ಸುಂದರವಾಗಿಸುವೆ. ಲಕ್ಕವಳ್ಳಿ ಭಾಗದ ಜನರ ಮನವೊಲಿಸಿ ಅಪ್ಪರ್ ಭದ್ರಾವನ್ನು ದುರ್ಗಕ್ಕೆ ತರುವೆ ಎನ್ನುತ್ತಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳಿರುವ ದಲಿತರನ್ನೇ ಈತ ನಂಬಿಕೊಂಡಿದ್ದರೆ ಉಳಿದಿಬ್ಬರು ಬೋವಿ ಜನಾಂಗದ ಮತಗಳ ಜೊತೆ ಉಳಿದ ಮತದವರ ಮತಗಳ ಮೇಲೆ ಕಣ್ಣಾಕಿದ್ದಾರೆ.

ಸಭ್ಯ, ಭ್ರಷ್ಟನಲ್ಲದ, ಯಾವುದೇ ಹಗರಣಗಳಿಗೆ ಸಿಲುಕದ ಕೆಲಸಗಾರ ಜನಪ್ರತಿನಿಧಿ ಜನಾರ್ದನ ಸ್ವಾಮಿಯವರತ್ತ ಜನರ ಮನಸ್ಸು ವಾಲಿದಂತೆ ತೋರುತ್ತಿದೆ. ಮೋದಿ ಅಲೆಯೂ ಜೊತೆ ಸೇರಿ ಜನಾರ್ದನ ಸ್ವಾಮಿ ದಡ ಸೇರಬಹುದು. ಆದ್ರೆ ಜಿಲ್ಲೆಯ ಜನರು ದಡ ಸೇರಿಯಾರೆ? ನೀರು, ರೈಲು, ಉದ್ಯೋಗದ ಪ್ರಶ್ನೆ ಕೇವಲ ಮರೀಚಿಕೆಯೇ? ಕಾದಿರುವ ಬಂಡೆಗಳು ಕಾದು ನೋಡುತ್ತಿವೆ. ಯಾವ ರಾಮನ ಸ್ಪರ್ಶ ತನಗಾದಿತೆಂದು ಕಾದಿರುವ ಅಹಲ್ಯೆಯಂತೆ.

English summary
Sitting BJP MP Janardhana Swamy ahead over his JDs (Goolihatti shekar) and Congress opponent(Chandrappa)s in Chitradurga, likey to retain the seat. Chitradurga lok sabha election round up by Dr. Lokesh Agasakatte.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X