ಚಿತ್ರದುರ್ಗ; ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್ ಲ್ಯಾಂಡಿಂಗ್ ಯಶಸ್ವಿ
ಚಿತ್ರದುರ್ಗ, ಏಪ್ರಿಲ್ 03; ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಯಂಚಾಲಿತ ಲ್ಯಾಂಡಿಂಗ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಚಿತ್ರದುರ್ಗದಲ್ಲಿರುವ ಇಸ್ರೋದ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಈ ಕಾರ್ಯಾಚರಣೆ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಈ ಕುರಿತು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ಭಾನುವಾರ ಈ ಕಾರ್ಯಾಚರಣೆ ಕೈಗೊಂಡಿದ್ದವು. ರಾಕೆಟ್ ಉಡಾವಣೆಯ ಪುನರ್ ಬಳಕೆಯ ಉಡಾವಣಾ ವಾಹನ (ಆರ್‌ಎಲ್‌ವಿ-ಎಲ್‌ಇಎಕ್ಸ್)ದ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಚಿತ್ರದುರ್ಗದ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಸ್ಥಾಪಿಸಲಾಗಿರುವ ರನ್ ವೇನಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪ್ರಯೋಗ ಯಶಸ್ವಿಯಾಗಿರುವ ಕುರಿತು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. 'ಏಪ್ರಿಲ್ 2ರಂದು ಮುಂಜಾನೆ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಡಿಆರ್‌ಡಿಒ ಜೊತೆಗೂಡಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಲಾಗಿದೆ' ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ. ಇದರ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.
ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ರಾಕೆಟ್ ಉಡಾವಣೆಯ ಪುನರ್ ಬಳಕೆಯ ಉಡಾವಣಾ ವಾಹನವನ್ನು ಟೇಕಾಫ್ ಮಾಡಲಾಗಿತ್ತು. 7.10ಕ್ಕೆ ಟೇಕಾಫ್ ಮಾಡಲಾಗಿದ್ದು, 7.40ಕ್ಕೆ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಲ್ಲಿ ನ್ಯಾವಿಗೇಶನ್ ಕಂಟ್ರೋಲ್ ಸಿಸ್ಟಮ್ ಬಳಕೆ ಮಾಡಿಕೊಂಡು ಲ್ಯಾಂಡ್ ಮಾಡಲಾಗಿದೆ. ಈ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೋ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಪರೀಕ್ಷೆಯ ವೇಳೆಯಲ್ಲಿ ಹೆಲಿಕಾಪ್ಟರ್ ಮೂಲಕ 3 ರಿಂದ 5 ಕಿ. ಮೀ. ಎತ್ತರದಿಂದ ಸಲತಲ ವೇಗದಲ್ಲಿ ರಾಕೆಟ್ ಉಡಾವಣೆಯ ಪುನರ್ ಬಳಕೆಯ ಉಡಾವಣಾ ವಾಹನವನ್ನು ರನ್ ವೇಗೆ ಇಳಿಬಿಡಲಾಯಿತು. ಕಂಪ್ಯೂಟರ್ ನಿಯಂತ್ರಿತ ಸೂಚನೆಗಳ ಸಹಾಯಯದಿಂದ ವಾಹನವನ್ನು ಅನ್‌ಲಾಕ್ ಮಾಡಲಾಯಿತು. ಹೀಗೆ ಇಳಿದ ವಾಹನದ ಕವಚ ರನ್‌ವೇಯಲ್ಲಿ ಜಾರಿಕೊಂಡು ಚಲಿಸಿದೆ. ಇಂತಹ ಪ್ರಯೋಗ ದೇಶದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿದೆ.

ರಾಕೆಟ್‌ಗಳ ಉಡಾವಣೆ ಬಳಿಕ ಪುನರ್ ಬಳಕೆ ಮಾಡಬಹುದಾದ ಉಡಾವಣಾ ವಾಹನ ಭೂಮಿಗೆ ಮರು ಪ್ರವೇಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ವೇಗದಲ್ಲಿ ಮಾನವ ರಹಿತವಾಗಿ ಸಾಗುವ ಇದು ನಿಖರವಾಗಿ ಬಾಹ್ಯಾಕಾಶದಿಂದ ವಾಪಸ್ ಆಗಿ ಸುರಕ್ಷಿತವಾಗಿ ಲ್ಯಾಂಡ್ ಆಗುವಂತಹ ಸಾಮರ್ಥ್ಯವನ್ನು ಪಡೆದಿರುವುದು ವಿಶೇಷವಾಗಿದೆ.
ಇಸ್ರೋ 2019ರಲ್ಲಿ ಆರ್‌ಎಲ್‌ವಿ-ಎಲ್‌ಇಎಕ್ಸ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಗಾಗಿ ದೇಶಿಯ ನ್ಯಾವಿಗೇಷನ್ ವ್ಯವಸ್ಥೆ, ಇನ್‌ಸ್ಟ್ರುಮೆಂಟೇಷನ್, ಸೆನ್ಸಾರ್ ಇತ್ಯಾದಿಗಳನ್ನು ಬಳಕೆ ಮಾಡಲಾಗಿದೆ. ಈ ಯೋಜನೆಗೆ ಭಾರತೀಯ ವಾಯುಪಡೆ, ಎಡಿಇ, ಎಡಿಆರ್‌ಡಿಇ ಸೇರಿದಂತೆ ವಿವಿಧ ಸಂಸ್ಥೆಗಳು ಸಹ ಕೊಡುಗೆ ನೀಡಿವೆ. ಡಾ. ಉನ್ನಿಕೃಷ್ಣನ್ ನಾಯರ್, ಎಟಿಎಸ್ ಪಿ ಪ್ರೋಗಾಂ ನಿರ್ದೇಶಕ ಶ್ಯಾಮ್ ಮೋಹನ್ ಎನ್. ಈ ತಂಡಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.
ಈ ಪ್ರಯೋಗದ ಬಗ್ಗೆ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ನಿರ್ದೇಶಕ ಎಸ್. ಉನ್ನಿಕೃಷ್ಣನ್ ನಾಯರ್ ಮಾತನಾಡಿದ್ದಾರೆ, "ಈ ಕಾರ್ಯಾಚರಣೆ ಅಂದುಕೊಂಡ ರೀತಿಯಲ್ಲಿಯೇ ನಡೆದಿದೆ. ಅತೀ ವೇಗದಲ್ಲಿ ನಿಖರವಾಗಿ ಭೂ ಸ್ಪರ್ಶವಾಗಿದೆ. ಈ ಕಾರ್ಯಾಚರಣೆಗೆ ಇಸ್ರೋ ಸಣ್ಣ ಅವೃತ್ತಿಯ ಆರ್‌ಎಲ್‌ವಿಯನ್ನು ಬಳಕೆ ಮಾಡಿದೆ. ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಬಳಕೆ ಮಾಡುವ ವಾಹನ ಇದಕ್ಕಿಂತ 1.6 ಪಟ್ಟು ದೊಡ್ಡದಾಗಿರುತ್ತದೆ" ಎಂದು ಹೇಳಿದ್ದಾರೆ.
ಇಸ್ರೋದ ರಾಕೆಟ್ ಉಡಾವಣೆಯ ಪುನರ್ ಬಳಕೆಯ ಉಡಾವಣಾ ವಾಹನ (ಆರ್‌ಎಲ್‌ವಿ-ಎಲ್‌ಇಎಕ್ಸ್) ಯಶಸ್ವಿ ಲ್ಯಾಂಡಿಂಗ್ ಬಳಿಕ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ನಾವು ಅಮೆರಿಕದ ಸಂಸ್ಥೆಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಇಸ್ರೋ ಘೋಷಣೆ ಮಾಡಿದೆ. ಇಂತಹ ಒಂದು ಪ್ರವಾಸಕ್ಕೆ ಪ್ರತಿ ಪ್ರವಾಸಿಗನಿಗೆ ಸುಮಾರು 6 ಕೋಟಿ ರೂ. ವೆಚ್ಚವಾಗಲಿದೆ.












Click it and Unblock the Notifications