ಅಕ್ರಮ ಚಟುವಟಿಕೆಗಳ ತಾಣವಾದ ಹೊಸದುರ್ಗ ಕ್ಷೇತ್ರ: ಗೂಳಿಹಟ್ಟಿ ಶೇಖರ್ ಗಂಭೀರ ಆರೋಪ
ಚಿತ್ರದುರ್ಗ, ಜುಲೈ 11: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭಯವಿಲ್ಲದೇ ಅಕ್ರಮ ಮರಳು ಸಾಗಾಟ, ಇಸ್ಪೀಟ್ ಆಟ ಹಾಗೂ ಕಂಡ ಕಂಡಲ್ಲಿ ಮದ್ಯಪಾನ ಸೇರಿದಂತೆ ಇನ್ನಿತರ ಅಕ್ರಮ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನು ಹೊಸದುರ್ಗ ಕ್ಷೇತ್ರದ ವಿವಿಧ ಗ್ರಾಮ ಗ್ರಾಮಗಳ, ಮನೆ ಮನೆಗಳಲ್ಲಿ ಮದ್ಯ ಮಾರಾಟ ಸಾಮಾನ್ಯವಾಗಿ ನಡೆಯುತ್ತಿದೆ. ಜೊತೆಗೆ ಮಾಡದಕೆರೆ, ಡಿಟಿ ವಟ್ಟಿ, ಸೇರಿದಂತೆ ಹಲವಾರು ಜಮೀನುಗಳಲ್ಲಿ ಇಸ್ಪೀಟ್ ದಂಧೆಯಾದರೆ, ದುರ್ಗಾಂಬಿಕಾ ಶಾಲೆ ಹಾಗೂ ಮುರಿಳೀಧರ ಪ್ರೌಢ ಶಾಲೆಗಳಲ್ಲಿ ಜೂಜು ಕೋರರ ಅಡ್ಡವಾಗಿದೆ. ಹಾಗೂ ಕೋಡಮ್ಮನ ದೇವಸ್ಥಾನ ಕೂಡ ಇಸ್ಪೀಟ್ ಆಟಗಾರರ ಅಡ್ಡವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇಸ್ಪೀಟ್ ಆಟದಲ್ಲಿ ಪೊಲೀಸರೂ ಸಹ ಭಾಗಿಯಾಗಿದ್ದಾರೆ ಎನ್ನುವುದು ಸಾರ್ವಜನಿಕರ ದೂರಾಗಿದ್ದು, ಸಾರ್ವಜನಿಕರು ಈ ಬಗ್ಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾಹಿತಿ ನೀಡಿದ್ದಾರೆ. ಇನ್ನು ಸಾರ್ವಜನಿಕರು ಯಾವುದಕ್ಕೂ ಹೆದರಬೇಡಿ, ನನಗೆ ಮಾಹಿತಿ ನೀಡಿ ಎಂದು ಗೂಳಿಹಟ್ಟಿ ಶೇಖರ್ ಅವರು ವಾಯ್ಸ್ ರೆಕಾರ್ಡ್ ಕಳುಹಿಸಿ ಈ ಮೂಲಕ ಮನವಿ ಮಾಡಿದ್ದಾರೆ.
ವಾಯ್ಸ್ ರೆಕಾರ್ಡ್ ಮಾಡಿ ಕಾರ್ಯಕರ್ತರಿಗೆ ಸಲಹೆ ನೀಡಿರುವ ಮಾಜಿ ಸಚಿವರು, ನಿಮ್ಮ ಸಹಾಯಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇತ್ತ ಸಾರ್ವಜನಿಕರು ಅಕ್ರಮ ಚಟುವಟಿಕೆಗಳ ಬಗ್ಗೆ ಕಡಿವಾಣ ಹಾಕಲು ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ಜನರು ಭಯದಲ್ಲೇ ಗೂಳಿಹಟ್ಟಿ ಅವರಿಗೆ ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಕಡಿವಾಣ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳೋಣ, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಣ ಎಂದಿರುವ ಗೂಳಿಹಟ್ಟಿ ಶೇಖರ್ ವಾಯ್ಸ್ ಮೆಸೇಜ್ ಎಲ್ಲೆಡೆ ವೈರಲ್ ಆಗಿದೆ.
ಸದ್ಯ ಹೊಸದುರ್ಗ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದ್ದು, ಕಾಂಗ್ರೆಸ್ ಹಿರಿಯ ಶಾಸಕ ಬಿಜಿ ಗೋವಿಂದಪ್ಪ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಕ್ಷೇತ್ರದ ಬಗ್ಗೆ ಬಿಜೆಪಿ ಮುಖಂಡ ಗಂಭೀರ ಆರೋಪ ಮಾಡುತ್ತಿದ್ದು, ಕಾಂಗ್ರೆಸ್ ಶಾಸಕರು ಈ ಆರೋಪದ ಪ್ರಕರಣವನ್ನು ಎಷ್ಟರ ಮಟ್ಟಿಗೆ ಪರಿಗಣಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications