ಡಿಕೆಶಿ ಹೊರಗೆ ಬರಲಿ ಎಂದು ನಾನೂ ಪ್ರಾರ್ಥಿಸಿದ್ದೆ: ಶ್ರೀರಾಮುಲು
ಚಿತ್ರದುರ್ಗ, ಅಕ್ಟೋಬರ್ 24: "ಡಿ.ಕೆ.ಶಿವಕುಮಾರ್ ಬಗ್ಗೆ ನಾನು ಮಾಡಿದ ಟೀಕೆಗಳು ನನ್ನ ಮನಸ್ಸಿನಿಂದ ಬಂದದ್ದಲ್ಲ" ಎಂದಿದ್ದಾರೆ ಆರೋಗ್ಯ ಸಚಿವ ಶ್ರೀರಾಮುಲು.
ಚಿತ್ರದುರ್ಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಹೊರಟ ವೇಳೆ ಮಾತನಾಡಿದ ಅವರು, "ಡಿಕೆ ಶಿವಕುಮಾರ್ ಜೈಲಿಗೆ ಹೋಗಬೇಕೆಂದು ನಾನೆಂದೂ ಬಯಸಿರಲಿಲ್ಲ. ಡಿ.ಕೆ.ಶಿವಕುಮಾರ್ ಹೊರಗೆ ಬರಲಿ ಎಂದು ಪ್ರಾರ್ಥಿಸಿದ್ದೆ. ಈಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಈ ದೇಶದ ಕಾನೂನಿನ ಮೇಲೆ ಎಲ್ಲರಿಗೂ ಗೌರವ, ನಂಬಿಕೆ ಇದೆ" ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಕುರಿತೂ ಮಾತನಾಡಿದರು. "ಸಿದ್ದರಾಮಯ್ಯ ಎಲ್ಲಿಯೂ ಸಮಾಧಾನವಾಗಿ ಇರುವುದಿಲ್ಲ. ಅವರು ಸಿಎಂ ಆಗಿದ್ದಾಗಲೂ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಅವರೇ ನೇರ ಕಾರಣ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ ಸಿದ್ದರಾಮಯ್ಯ ಇರ್ತಾರೆ" ಎಂದರು.

ಡಿಕೆಶಿ ಜೈಲಿಗೆ ಹೋಗಿದ್ದಕ್ಕೆ ಖುಷಿಪಟ್ಟಿದ್ದ ಬಿಜೆಪಿ ನಾಯಕರಿಗೆ ಧನ್ಯವಾದ ಹೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮುಲು, "ಬಿಜೆಪಿಯವರು ಶತ್ರುಗಳಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ದೇವರೇ ಕೈ ಹಿಡಿದು ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬುದು ನಮ್ಮ ನಂಬಿಕೆ, ಯಾರೇ ತಪ್ಪು ಮಾಡಿದರೂ ಕಾನೂನು ಇದೆ. ಡಿಕೆಶಿ ಜೈಲಿಗೆ ಹೋಗಿದ್ದಾಗ ಅವರು ಬೇಗ ಹೊರಗೆ ಬರಲಿ ಎಂದು ನಾವೂ ಪ್ರಾರ್ಥಿಸಿದ್ದೇವೆ" ಎಂದು ತಿಳಿಸಿದರು.












Click it and Unblock the Notifications