ಎರಡನೇ ಬಾರಿಗೆ ಕೋಡಿ ಬಿದ್ದು ದಾಖಲೆ ಸೃಷ್ಟಿಸಿದ್ದ ವಿವಿ ಸಾಗರ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಇಲ್ಲಿದೆ ವಿವರ
ಚಿತ್ರದುರ್ಗ, ಜೂನ್, 28: ರಾಜ್ಯದ ಹಲವೆಡೆ ಮಾತ್ರ ಮುಂಗಾರು ಆರ್ಭಟ ಶುರು ಮಾಡಿದೆ. ಆದರೆ ಇನ್ನು ಕೆಲವೆಡೆ ಮಳೆರಾಯನ ಸುಳಿವೇ ಇಲ್ಲದಂತಾಗಿದೆ. ಇನ್ನು ಮಳೆಗಾಗಿ ರೈತರು ಮೋಡದ ಕಡೆ ಮುಖ ಮಾಡಿ ಕುಳಿತುಕೊಂಡಿದ್ದಾರೆ. ಅದರಲ್ಲೂ ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗಿ ನೀರಿಲ್ಲದೆ ಸೊರಗುತ್ತಿವೆ. ಹಾಗಾದರೆ ಸದ್ಯ ಕೋಟೆ ನಾಡು ಚಿತ್ರದುರ್ಗದ ಏಕೈಕ ಜೀವನಾಡಿ ಆಗಿರುವ ವಾಣಿ ವಿಲಾಸ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟು ಎಂದು ಇಲ್ಲಿ ತಿಳಿಯಿರಿ.
ಬಯಲು ಸೀಮೆಯ ಜೀವನಾಡಿ ಆಗಿರುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ 2022ರಲ್ಲಿ 89 ವರ್ಷಗಳ ಬಳಿಕ 135 ಅಡಿ ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಕೋಡಿ ಬಿದ್ದು ಮೈದುಂಬಿ ಹರಿದಿತ್ತು. ಇದೀಗ ವಿವಿ ಸಾಗರದ ನೀರಿನ ಮಟ್ಟ 123.50 ಅಡಿ (23.13 ಟಿಎಂಸಿ ನೀರು) ಇದೆ.

ಯಾವಗೆಲ್ಲ ಕೋಡಿ ಬಿದ್ದಿದೆ?
1935ರಲ್ಲಿ ಡ್ಯಾಂ ಮೊದಲ ಬಾರಿಗೆ ತುಂಬಿ ಕೋಡಿ ಬಿದ್ದು ಹರಿದಿತ್ತು. ಈ ವರ್ಷದಲ್ಲಿ ಮಳೆ ಇಲ್ಲದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಿದ್ದ ವಿವಿ ಸಾಗರ ಡ್ಯಾಂನಲ್ಲಿ ನೀರು ಖಾಲಿ ಆಗುವ ಆತಂಕ ಎದುರಾಗಿದೆ. ಮತ್ತೊಂದೆಡೆ ಈ ವರ್ಷದಲ್ಲಿ ಮಳೆ ಬರುವ ಮುನ್ಸೂಚನೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಕುಡಿಯುವ ನೀರಿಗಾಗಿ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆಗೆ ನೀರು ಹರಿಸುವ ಸಾಧ್ಯತೆ ಹೆಚ್ಚಿದೆ.
ಬಿತ್ತನೆ ಕಾರ್ಯ ಕುಂಠಿತ
ಜೊತೆಗೆ ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ತೋಟಗಳಿಗೆ ನೀರು ಹರಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಜಿಲ್ಲೆಯಲ್ಲಿ ಮಳೆ ಇಲ್ಲದೆ ಬಿತ್ತನೆ ಕಾರ್ಯ ಕುಂಠಿತವಾಗಿದೆ.
ಮಳೆ ಇಲ್ಲದ ಕಾರಣ ಈ ಬಾರಿ ಈರುಳ್ಳಿ, ಶೇಂಗಾ, ತೊಗರಿ, ಮೆಕ್ಕೆಜೋಳ, ರಾಗಿ ಸೇರಿದಂತೆ ಮತ್ತಿತರರ ಬೆಳೆಗಳು ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಹೊಲಗಳಲ್ಲಿ ಉಳುವೆ ಮಾಡಲು ರೈತರ ಜಮೀನಿಗಳು ಹಸನಾಗಿಲ್ಲ. ಮುಂಗಾರು ಕೈಕೊಟ್ಟಿರುವ ಹಿನ್ನೆಲೆ ಈ ವರ್ಷದಲ್ಲಿ ಬೆಳೆಗಳನ್ನು ಬೆಳೆಯುವುದು ಹೇಗೆ ಎಂಬ ಆತಂಕದ ವಾತಾವರಣ ರೈತರಲ್ಲಿ ಸೃಷ್ಟಿಯಾಗಿದೆ.
ಹಾಗೆಯೇ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದುಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ124.50 ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿತ್ತು.
1907 ರಲ್ಲಿ ಕಾಮಗಾರಿ ಪೂರ್ಣ
ಈ ಅಣೆಕಟ್ಟನ್ನು 1897ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ನಿರ್ಮಿಸಿತ್ತು. ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಇದರ ನಿರ್ಮಾಣ ಕಾರ್ಯ ಕೈಗೊಂಡು 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದರು. ಅಲ್ಲದೇ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಿವಿ ಸಾಗರದ ನೀಲಿನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ.
ಒಟ್ಟಾರೆಯಾಗಿ ಜಲಾಶಯಕ್ಕೆ ಯಾವುದೇ ಒಳ ಹರಿವು ಇಲ್ಲ. ಮತ್ತೊಂದು ಕಡೆ ಭದ್ರಾ ಜಲಾಶಯದಲ್ಲೂ ಸಹ ನೀರು ಇಲ್ಲದಿರುವುದರಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಲಕ್ಷಣಗಳು ಕಾಣುತ್ತಿಲ್ಲ. ಮತ್ತೊಂದೆಡೆ ಇಲ್ಲಿ ಮುಂದಿನ ದಿನಗಳಲ್ಲಾದರೂ ಮಳೆರಾಯ ಆರ್ಭಟ ಶುರು ಮಾಡಲಿದ್ದಾನೆಯ ಎಂದು ಕಾದುನೋಡಬೇಕಿದೆ.












Click it and Unblock the Notifications