Bhadra Dam: ಭದ್ರೆ ನೀರಿಗಾಗಿ ಹಿರಿಯೂರು ಬಂದ್ ಯಶಸ್ವಿ, ರಾಜ್ಯ & ಕೇಂದ್ರ ಸರ್ಕಾರದ ವಿರುದ್ಧ ಸಮರ
ಹಿರಿಯೂರು, ಫೆಬ್ರವರಿ, 21: ಭದ್ರಾ ಮೇಲ್ದಂಡೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಹಾಗೂ ಕೇಂದ್ರ ಸರ್ಕಾರ ಶೀಘ್ರವೇ 5,300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಎತ್ತಿನಹೊಳೆ ಯೋಜನೆಯಿಂದ ವಿವಿಸಾಗರಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಹಿರಿಯೂರ್ ಬಂದ್ ಸಂಪೂರ್ಣ ಯಶಸ್ಸು ಕಂಡಿತು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ರೈತಪರ, ಕನ್ನಡಪರ, ದಲಿತಪರ ಹಾಗೂ ವಿವಿಧ ಸಂಘಟನೆಗಳ ವ್ಯಾಪಕ ಬೆಂಬಲದಿಂದ ಬಂದ್‌ಗೆ ಕರೆ ನೀಡಿದ್ದು, ಅದರಂತೆ ನಗರದ ಬಟ್ಟೆ, ಕಿರಾಣಿ, ಪ್ರಾವಿಜನ್ ಸ್ಟೊರ‍್ಸ್, ಹೋಟೆಲ್ ಸೇರಿದಂತೆ ಎಲ್ಲಾ ಅಂಗಡಿಮುಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ನಗರ ವ್ಯಾಪ್ತಿಯಲ್ಲಿನ ಖಾಸಗಿ ಶಾಲಾ ಕಾಲೇಜುಗಳು ರಜೆ ಘೋಷಿಸಲಾಗಿತ್ತು. ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋ ಸಂಚಾರ ಬಿಟ್ಟರೆ ಯಾವುದೇ ಬಸ್, ಬೃಹತ್ ವಾಹನಗಳಿಗೆ ನಗರ ಪ್ರವೇಶಕ್ಕೆ ನಿಷೇಧ ಮಾಡಲಾಗಿತ್ತು.

ಬೆಳಗ್ಗೆ 10 ಗಂಟೆಗೆ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ನೆಹರೂ ಮಾರುಕಟ್ಟೆ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಪ್ರತಿಭಟನೆ ಕುರಿತು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಗಳು ಜಿಲ್ಲೆಯ ಜನತೆಗೆ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ. ಭದ್ರಾ ಕಾಮಗಾರಿಗೆ ಚುರುಕುಗೊಳಿಸಿ ಪೂರ್ಣಗೊಳ್ಳಬೇಕಾದರೆ ನಾಲ್ಕು ಜಿಲ್ಲೆಯ ಜನತೆ ಸಂಘಟಿತರಾಗಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕು. ಕಾಮಗಾರಿ ಪೂರ್ಣಗೊಳಿಸದೇ ತಾಲೂಕಿನ ಜೆಜೆ ಹಳ್ಳಿಯಲ್ಲಿ ಹನಿ ನೀರಾವರಿ ಕಾಮಗಾರಿ ನಡೆಯುತ್ತಿದೆ. ಕಮಿಷನ್ ಪಡೆಯಲಿಕ್ಕೆ ಮಾತ್ರ ಕಾಮಗಾರಿ ಆರಂಭವಾಗಿದೆ. ಆದರೆ ಮುಗಿಸುವ ಬಗ್ಗೆ ಯಾರಿಗೂ ಬೇಕಿಲ್ಲ. ಭದ್ರಾದಿಂದ ವಿವಿಎಸ್‌ಗೆ 5 ಟಿಎಂಸಿ ಮೀಸಲಿಡಬೇಕೆಂದು ಒತ್ತಾಯಿಸಿದರು.
ಕೆ.ಟಿ.ಶಿವಕುಮಾರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಹೊರತು ಇತಿಹಾಸದಲ್ಲೇ ಬೀದಿಗಿಳಿದು ಹೋರಾಟ ಮಾಡಿ ವಿವಿ ಸಾಗರ ಡ್ಯಾಂಗೆ ನೀರು ಹರಿಸುವವರು ಒಬ್ಬರು ಇಲ್ಲ ಎಂದು ಹೇಳಿದರು. ನಿರಂತರವಾಗಿ ಪ್ರತಿಭಟನೆ ನಡೆಸುವ ಮೂಲಕ ಆಯಾ ತಾಲೂಕಿನಲ್ಲಿ ಪ್ರತಿಭಟನೆಗಳನ್ನು ಉಗ್ರವಾಗಿ ಮುಂದುವರಿಸಿ ಶಾಸಕರ ರಾಜೀನಾಮೆಗೆ ಒತ್ತಾಯಿಸೋಣ ಎಂದು ತಿಳಿಸಿದರು.
ಜಿಲ್ಲೆಯ ಸ್ವಾಭಿಮಾನದ ತಾಕತ್ತಿದ್ದರೆ ಜಿಲ್ಲೆಯ ಆರು ಜನ ಶಾಸಕರು ರಾಜೀನಾಮೆ ನೀಡಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಹೋರಾಟ ಮಾಡದೆ ಮಂತ್ರಿ ಸ್ಥಾನ ಬೇಕು, ನಿಗಮ ಮಂಡಳಿ ಬೇಕು, ಟಿಕೆಟ್ ಬೇಕು ಎನ್ನುವುದನ್ನು ಬಿಟ್ಟು ಜನತೆಯ ನೀರಿನ ಕಷ್ಟವನ್ನು ಅರಿತು ಹೋರಾಟದ ಮೂಲಕ ನ್ಯಾಯವನ್ನು ದೊರಕಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಷಣ್ಮುಖಪ್ಪ ಮಾತನಾಡಿ, ಕೇಂದ್ರ ಸರ್ಕಾರ ಈ ನೆಲದ ಸಮಸ್ಯೆ ಅರಿತು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ. ಸುಳ್ಳು, ಮೋಸ, ವಂಚನೆಯೇ ಸರ್ಕಾರದ ಕೆಲಸವಾಗಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡದೇ, ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಇದು ನಿರ್ಲಜ್ಜ ರಾಜಕಾರಣ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಐದು ಶಾಸಕರಿದ್ದರೂ ಒತ್ತಡ ಹೇರುತ್ತಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸೌಜನ್ಯಕ್ಕೂ ಮಾತನಾಡಿಸದೇ ಇರುವ ಸಚಿವರು. ಸಂಪೂರ್ಣ ಶೋಷಿತರ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲೆ ಬಗ್ಗೆ ಕಿಂಚಿತು ಕಾಳಜಿಯಿಲ್ಲದ ಸಿಎಂ ಸಿದ್ದರಾಮಯ್ಯ ಅವರ ಶೋಷಿತ ಸಮಾವೇಶ ಯಾವ ಪುರುಷಾರ್ಥಕ್ಕೆ? ಎಂದರು. ಮೈಸೂರಿನ ರಾಣಿ ತನ್ನ ಬಂಗಾರದ ಒಡವೆ ಅಡವಿಟ್ಟು ವಿವಿಸಾಗರ ಡ್ಯಾಂ ಕಟ್ಟಿದ್ದಾರೆ. ಆದರೆ ಅದಕ್ಕೆ ನೀರು ತರುವ ಯೋಗ್ಯತೆ ರಾಜಕಾರಣಿಗಳಿಗಿಲ್ಲ ಎಂದರು.
ಇನ್ನು ಹಿರಿಯೂರು ಬಂದ್ ಹಿನ್ನೆಲೆಯಲ್ಲಿ ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಇನ್ನಿತರ ಭಾಗಗಳಿಂದ ಬರುವ ವಾಹನಗಳಿಗೆ ನಗರದೊಳಗೆ ಪ್ರವೇಶಿಸದಂತೆ ನಿಷೇಧಿಸಿ, ಪ್ರತ್ಯೇಕ ಸಂಚಾರ ಮಾರ್ಗ ಕಲ್ಪಿಸಲಾಗಿತ್ತು. ಬಂದ್ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಂದ್‌ಗೆ ಸಹಕರಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಸಿದ್ದವೀರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಬಿಜೆಪಿ ಹಿರಿಯ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ಜೆಡಿಎಸ್ ಮುಖಂಡರಾದ ರವೀಂದ್ರಪ್ಪ, ಡಿ.ಯಶೋಧರ, ಆರನಕಟ್ಟೆ ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಲಿಂಗರೆಡ್ಡಿ ಸೇರಿದಂತೆ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಬಬ್ಬೂರು ಸುರೇಶ್, ಡಿಎಸ್‌ಎಸ್ ತಿಮ್ಮರಾಜು, ಜೆಡಿಎಸ್ ತಾ.ಅಧ್ಯಕ್ಷ ಹನುಮಂತರಾಯ, ವಂದೇ ಮಾತರಂ ಗಿರಿಧರ್, ಕುಮಾರ್, ವಕೀಲರ ಸಂಘ, ಬರಹಗಾರರ ಸಂಘ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಹಿತ ರಕ್ಷಣಾ ಸೇನೆ, ಕರ್ನಾಟಕ ಭೀಮ್ ಸೇನ್, ವಿಜಯ ಸೇನೆ ಸೇರಿದಂತೆ ಸುಮಾರು 50ಕ್ಕೂ ಅಧಿಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications