ಏಕಾಏಕಿ ಬಿರುಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಚಿತ್ರದುರ್ಗ, ಮೇ 24: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರ ಸಂಜೆ 6 ಘಂಟೆಯ ಸಮಯದಲ್ಲಿ ಭಾರೀ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆರಾಯನ ಆರ್ಭಟಕ್ಕೆ ನಗರದಲ್ಲಿ ರಸ್ತೆಗಳಲ್ಲಿ ನೀರು ತುಂಬಿದ್ದು ಈಜು ಕೊಳಗಳಂತಾಗಿವೆ. ಮಳೆ ಬಂದ ರಭಸಕ್ಕೆ ನೀರು ರಸ್ತೆಯ ಮೇಲೆ ಉಕ್ಕಿ ಹರಿದಿದೆ. ಇನ್ನು ಬೀಸಿದ ಗಾಳಿಯ ರಭಸಕ್ಕೆ ಅಂಗಡಿ ಮುಗ್ಗಟ್ಟುಗಳ ಬೋರ್ಡ್‌ಗಳು ನೆಲಕಚ್ಚಿವೆ. ಇದಲ್ಲದೇ ನಗರದ ಸರ್ಕಾರಿ ಕಾಲೇಜು ಮುಂಭಾಗದ ಪ್ರಮುಖ ರಸ್ತೆಯ ಮೇಲೆ ಮಳೆ ನೀರು ರಭಸವಾಗಿ ಹರಿದಿದ್ದು, ಎಲ್ಲಿ ನೋಡಿದರೂ ನೀರೋ, ನೀರೋ ಎನ್ನುವಂತಾಗಿದೆ.

ರಸ್ತೆ ಮೇಲೆ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಆಟೋ ರಸ್ತೆಯ ಮಧ್ಯೆ ಸಿಕ್ಕಿಹಾಕಿಕೊಂಡ ಘಟನೆ ಕೂಡ ನಡೆದಿದೆ. ಬಿರುಗಾಳಿ ಮಳೆಗೆ ಮರ ಮುರಿದು ರಸ್ತೆಗೆ ಬಿದ್ದಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.
ನಗರದ ಸರ್ಕಾರಿ ಕಾಲೇಜು ಎದುರು, ವೈಶಾಲಿ ಸರ್ಕಲ್, ಮುಖ್ಯ ಸರ್ಕಲ್, ಸೇರಿ ಅನೇಕ ಕಡೆ ರಸ್ತೆಯ ಮೇಲೆ ಮಳೆ ನೀರು ಹರಿದಿದೆ. ಭಾರೀ ಮಳೆಗೆ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮಳೆಯಿಂದ ಕೋಟೆನಾಡು ಕತ್ತಲೆಯಲ್ಲಿ ಮುಳುಗಿದೆ.

ತೆಂಗಿನ ಮರಕ್ಕೆ ಬಡಿದ ಸಿಡಿಲು
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತವಂದಿ ಗ್ರಾಮದ ರೈತ ಗೌಡನಿಗೆ ಸೇರಿದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಇದರಿಂದ ತೆಂಗಿನ ಮರ ಸಂಪೂರ್ಣವಾಗಿ ಹಾನಿಯಾಗಿದೆ. ಇದಲ್ಲದೆ ಭಾರೀ ಮಳೆಗೆ ಬಾಳೆ ತೋಟ ಕೂಡ ನಾಶವಾಗಿದೆ. ಭಾರೀ ಮಳೆಯಿಂದ ಬೆಳೆಗಳು ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಾಮರಾಜನಗರದಲ್ಲಿ ಭಾರೀ ಮಳೆ: ಮನೆ ನೆಲಸಮ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮೂಕನಪಾಳ್ಯ ಗ್ರಾಮದ ನಾಗೇಶ್ ನಾಯಕ ಎಂಬವರಿಗೆ ಸೇರಿದ ಮನೆ ನೆಲಸಮವಾಗಿದೆ.
ಸತತ ಎರಡು ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಬಿರುಗಾಳಿಯಿಂದ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಏಕಾಏಕಿ ಬೀಸಿದ ಬಿರುಗಾಳಿಯಿಂದ ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಕಳೆದು ಕೆಲ ದಿನಗಳಿಂದ ಆಗುತ್ತಿರುವ ಮುಂಗಾರು ಪೂರ್ವ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.











Click it and Unblock the Notifications