ಅಕ್ಟೋಬರ್ 13ಕ್ಕೆ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಹಾರನಕಣಿವೆ ರಂಗಯ್ಯನ ಅಂಬಿನೋತ್ಸವ-ವಿಶೇಷತೆ ತಿಳಯಿರಿ
ಹಿರಿಯೂರು, ಅಕ್ಟೋಬರ್, 06: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ಮೇಲ್ಭಾಗದ ಬುಡಕಟ್ಟು ಕಾಡುಗೊಲ್ಲ ಐತಿಹಾಸಿಕ ಪ್ರಸಿದ್ಧಿ, ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ಅಕ್ಟೋಬರ್ 13ರಂದು ಜರುಗಲಿದೆ. ಹಾಗಾದರೆ ಈ ದೇವಸ್ಥಾನದ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಗುತ್ತದೆ. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತರಲಾಗುತ್ತದೆ.

ಬಳಿಕ ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದ ನಂತರ ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿದು, ಬನ್ನಿ ಮುಡಿಯುವ ಅಂಬಿನೋತ್ಸವ ಕಾರ್ಯಕ್ರಮ ನೇರವೇರುತ್ತದೆ.
ವಿಜಯದಶಮಿಯಂದು ಅಂಬು: ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಎಡಭಾಗದ ವಿವಿ ಸಾಗರ ಜಲಾಶಯದ ಪಕ್ಕದಲ್ಲಿ (ಕಾಡು, ಮೇಡಿನ ಪ್ರದೇಶ) ನೆಲೆಸಿರುವ ಹಾರನಕಣಿವೆ ಶ್ರೀ ರಂಗಯ್ಯನೊಬ್ಬ ಪವಾಡ ಪುರುಷನೆಂದರೇ ತಪ್ಪಾಗಲಾರದು. ಈ ಜಾತ್ರೆಯು ಪ್ರತಿ ವರ್ಷ ಆಶ್ವೀಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ, ಸ್ವಾಮಿಯ ದರ್ಶನ ಪಡೆಯುತ್ತಾರೆ.
ಕಾಡುಗೊಲ್ಲರ ಧಾರ್ಮಿಕ ಕೇಂದ್ರ: ಈ ಐತಿಹಾಸಿಕ ದೇವಾಲಯವು ಮಧ್ಯ ಕರ್ನಾಟಕದ ಬುಡುಕಟ್ಟು ಕಾಡುಗೊಲ್ಲರ ಧಾರ್ಮಿಕ ಕೇಂದ್ರವಾಗಿದ್ದು, ಜೊತೆಗೆ ಸ್ವಾಮಿ ರಂಗಪ್ಪನ ಮಹಿಮೆ ಅಪಾರವಾಗಿದೆ. "ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು" ಶ್ರೀ ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ನಂಬಿ ಬಂದವರನ್ನು ರಂಗಯ್ಯ ಯಾರನ್ನೂ ಕೈ ಬಿಟ್ಟಿಲ್ಲ ಎನ್ನುವುದು ಭಕ್ತರಲ್ಲಿ ಬಲವಾದ ನಂಬಿಕೆಯಾಗಿದೆ.
ಈ ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಪ್ರಸಿದ್ಧಿ ಹಿನ್ನೆಲೆ ಇರುವುದುಂಟು. ವಿಷ ಜಂತುಗಳಿಂದ ಕಚ್ಚಿಸಿಕೊಂಡು
ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ, ಸಾವು ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದವರಿಗೆ ಸ್ವಾಮಿಯ ಪವಾಡದಿಂದ ಗುಣಮುಖ ವಾಗಿರುವುದು ಅದೇಷ್ಟೋ ಉದಾಹರಣೆಗಳಿವೆ. ಆದ್ದರಿಂದ ಶ್ರೀ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಅಂತಲೂ ಕರೆಯುವುದುಂಟು.
ವಿಷ ಜಂತುಗಳ ಹರಕೆ: ಮನೆ, ಹೊಲ, ಗದ್ದೆಗಳಲ್ಲಿ ರಾತ್ರಿ ಪಾಳೆಯದಲ್ಲಿ ವಿಷ ಜಂತುಗಳು ತಮಗೆ ಕಾಣಿಸಿಕೊಂಡಾಗ ಅಥವಾ ಕಚ್ಚಿದಾಗ ಮೊದಲು ನೆನಪಾಗುವುದು ಹಾರನಕಣಿವೆ ರಂಗಪ್ಪ. ವಿಷಜಂತುಗಳು ಕಚ್ಚಿದಾಗ ಸ್ವಾಮಿಯ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳಗಳನ್ನು ಅರ್ಪಿಸುತ್ತೇವೆಂದು ಹರಕೆ ಕಟ್ಟಿಕೊಂಡು, ಅಂಬಿನೋತ್ಸವ ಜಾತ್ರೆಯ ದಿನದಂದು ಚಿನ್ನ, ಬೆಳ್ಳಿ, ತಾಮ್ರದ ವಿಗ್ರಹಗಳನ್ನು ತಂದಿದ್ದ ಜೆರಿ, ಹಾವು, ಚೇಳುಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುವ ದೃಶ್ಯ ಗಮನ ಸೆಳೆಯುತ್ತದೆ.
ಸಕ್ಕರೆ ಬಾಳೆಹಣ್ಣಿನ ಪ್ರೀಯ: ಸ್ವಾಮಿಗೆ ಸಕ್ಕರೆ ಬಾಳೆಹಣ್ಣಿನ ರಸಾಯನ ಅಂದ್ರೆ ಮಹಾದಾನಂದ. ಜಾತ್ರೆಯ ದಿನದಂದು ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಫಸಲಿಗೆ ಫಲ ಬರಲಿ, ತಮ್ಮ ಆರೋಗ್ಯ ಸುಧಾರಿಸಲಿ ಎಂದು ಭಕ್ತರು ಕೆಜಿ, ಗೊನೆಗಟ್ಟಲೇ ಸಕ್ಕರೆ ಬಾಳೆ ಹಣ್ಣಿನ ನೈವೇದ್ಯದ ಮೂಲಕ ಮತ್ತೊಂದು ಹರಕೆಯನ್ನು ರಂಗನಾಥನಿಗೆ ಸಲ್ಲಿಸುತ್ತಾರೆ.
ಜಾತ್ರೆಗೆ ಬಂದಿದ್ದಂತಹ ಭಕ್ತರು ತಂದಿರುವ ಸಕ್ಕರೆ, ಬಾಳೆಹಣ್ಣನ್ನು ಹಸಿರು ಗಿಡಗಳಾದ ಟಂಗಟೆ, ತುಂಬೆಗಿಡ, ಎಕ್ಕದ ಗಿಡದ ಬುಡದಲ್ಲಿ ಬಾಳೆ ಎಲೆ ಹಾಕಿ, ಅದರಲ್ಲಿ ಸುಲಿದ ಬಾಳೆ ಹಣ್ಣಿಗೆ ಸಕ್ಕರೆ ಬೆರೆಸಿ, ಪೂಜೆ ಮಾಡಿದ ಬಳಿಕ ದಾಸಯ್ಯನಿಗೆ ನೀಡಲಾಗುತ್ತದೆ. ನಂತರ ಅಲ್ಲಿದ್ದವರಿಗೆ ಪ್ರಸಾದ ಹಂಚುವುದು ಜಾತ್ರೆಯ ಮತ್ತೊಂದು ವಿಶೇಷತೆಯಾಗಿದೆ.
ಈ ದೇವಾಲಯದ ಕಾಡುಗೊಲ್ಲ ಸಮುದಾಯ ಪುಣ್ಯ ಕ್ಷೇತ್ರವಾಗಿದೆ. ಎಲ್ಲಾ ಸರ್ವಧರ್ಮಗಳ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರಲ್ಲೂ ಜಾತ್ರೆಗೆ ವಿಶೇಷವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ.
ಪ್ರತಿ ಶನಿವಾರ ಹಾಗೂ ಅಮಾವಾಸ್ಯೆಯ ದಿನದಂದು ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ. ಮದುವೆ, ಉದ್ಯೋಗ ಹಾಗೂ ಸಂತಾನ ಫಲವನ್ನು ಸ್ವಾಮಿ ಕರುಣಿಸುವ ಜೊತೆಗೆ ಆರೋಗ್ಯ ಸಮಸ್ಯೆಯನ್ನು ಪರಿಹರಿಸುತ್ತಾನೆಂಬುದು ಭಕ್ತರ ನಂಬಿಕೆಯಾಗಿದೆ. ಮುಂದೆ ಈ ದೇವಾಲಯವನ್ನು ತಿರುಪತಿಯ ಗೋವರ್ಧನ ಗಿರಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಾಧ್ಯತೆಯಿದ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications