ನಾಳೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಚಿತ್ರದುರ್ಗದಲ್ಲಿ ಮಹಿಳೆಯರಿಗೆ ಅರಿಶಿನ, ಕುಂಕುಮ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ
ಚಿತ್ರದುರ್ಗ, ಆಗಸ್ಟ್, 29: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದೆ. ಕುಟುಂಬದ ನಿರ್ವಹಣೆಗಾಗಿ ಯಜಮಾನನಿಗೆ ಪ್ರತಿ ತಿಂಗಳಿಗೆ 2000 ರೂ. ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯರಿಂದ ಅರ್ಜಿ ಸ್ವೀಕರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಆಗಸ್ಟ್ 30) ಮೈಸೂರಿನಲ್ಲಿ ಅಧಿಕೃತವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಚಾಲನೆ ನೀಡಲಿದ್ದಾರೆ.
ಅಲ್ಲದೆ ಕೋಟೆ ನೋಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಅದರಂತೆಯೇ ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮನೆಯ ಯಜಮಾನಿಯನ್ನು ಭೇಟಿ ಮಾಡಿ "ಅರಿಶಿನ ಕುಂಕುಮ ನೀಡಿ" ಅರ್ಹ ಫಲಾನುಭವಿ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಹಿರಿಯೂರು ತಾಲೂಕಿನ 31 ಗ್ರಾಮ ಪಂಚಾಯಿತಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದಾರೆ. ಇದಲ್ಲದೆ ಮನೆಯ ಮುಂಭಾಗದಲ್ಲಿ ನಾನು ಯಜಮಾನಿ, ನಾನು ಗೃಹಲಕ್ಷ್ಮೀ, ನಾನು ನಾಯಕಿ ಹೀಗೆ ರಂಗೋಲಿ ಮೂಲಕ ಮನೆಯ ಅಂಗಳದಲ್ಲಿ ಬರೆದುಕೊಂಡಿದ್ದಾರೆ.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಅರಿಶಿನ, ಕುಂಕುಮ ನೀಡಿ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರವ ವಿವರ
ಈಗಾಗಲೇ ಜಿಲ್ಲೆಯಲ್ಲಿ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲಾಗಿದ್ದು, ಜಿಲ್ಲೆಯಲ್ಲಿ 3.54 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿ 59,310 ಹಾಗೂ ಗ್ರಾಮೀಣ ಭಾಗದಲ್ಲಿ 2,95,576 ಸೇರಿ ಒಟ್ಟು 3,54,886 ಮಹಿಳೆಯುರು ಯೋಜನೆಗೆ ನೋಂದಾಯಿಸಿಕೊಂಡಿದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತಾಲೂಕುವಾರು ನೋಂದಣಿ ವಿವರ
1. ಚಿತ್ರದುರ್ಗ - 82,536,
2. ಚಳ್ಳಕೆರೆ - 76,986
3. ಹಿರಿಯೂರು - 63,565
4. ಹೊಳಲ್ಕೆರೆ - 46,999
5. ಹೊಸದುರ್ಗ - 50,580
6. ಮೊಳಕಾಲ್ಮುರು - 34,220












Click it and Unblock the Notifications