Gruha Lakshmi Scheme: 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಬೃಹತ್ ಗಾತ್ರದ ಯೋಜನೆ: ಸಚಿವ ಡಿ.ಸುಧಾಕರ್
ಚಿತ್ರದುರ್ಗ, ಆಗಸ್ಟ್, 30: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಬೃಹತ್ ಗಾತ್ರದ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರದ 5 ಭರವಸೆಗಳಲ್ಲಿ ಇದು ಬೃಹತ್ ಗಾತ್ರದ ಮೊತ್ತ ಭರಿಸುವ ಯೋಜನೆಯಾಗಿದೆ. ಮೈಸೂರಿನಲ್ಲಿ ಈ ಯೋಜನೆಗೆ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿಎಂ ಚಾಲನೆ ನೀಡಿದರು. ಮಹಿಳೆಯರಿಗೆ ನಮ್ಮ ಸರ್ಕಾರ ಅತೀ ದೊಡ್ಡ ಶಕ್ತಿ ನೀಡಿದೆ ಎಂದರು.

ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿದ್ದು ಕಾಂಗ್ರೆಸ್. ಚುವಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ. ಸರ್ಕಾರ ಬಂದ 3 ತಿಂಗಳಿನಲ್ಲಿ 4 ಭರವಸೆಗಳನ್ನು ಈಡೇರಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಶೇಕಡಾ 90ರಷ್ಟು ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನುಳಿದಂತೆ ಎಲ್ಲರೂ ನೋಂದಣಿ ಮಾಡಿಸಿ, ಇದಕ್ಕೆ ಯಾವುದೇ ಸಮಯದ ಮಿತಿ ಇಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ. ಇನ್ನು ಭದ್ರಾ ಯೋಜನೆಯನ್ನು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣ ಮಾಡುತ್ತೇವೆ. ಇತ್ತ ಈಗಾಗಲೇ ಚಿತ್ರದುರ್ಗದ ಮೆಡಿಕಲ್ ಕಾಲೇಜಿನ ಕಾರ್ಯ ಆರಂಭಗೊಂಡಿದೆ. ರಾಜ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಜಾರ್ಜ್ ಶೀಟ್ ಹಾಕಿ ಮನೆಗೆ ಕಳುಹಿಸಿದ್ದಾರೆ ಎಂದರು. ಇನ್ನು ಮೈಸೂರಿಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದ್ದು, ನಮ್ಮ ಜಿಲ್ಲೆಯಲ್ಲೂ ಕೂಡ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಮುಂದಿನ ಎರಡು ದಿನಗಳಲ್ಲಿ ನಮ್ಮ ಎಲ್ಲಾ ಫಲಾನುಭವಿಗಳ ಖಾತೆಗೆ ಎರಡು ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ. ಹೀಗೆ ಬೃಹತ್ ಗಾತ್ರದ ನಾಲ್ಕು ಯೋಜನೆಗಳ ಭರವಸೆಯನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಗ್ಯಾಸ್ ದರ 200 ರೂಪಾಯಿ ಕಡಿಮೆ ಮಾಡಿದರೆ ಆಗುತ್ತಾ? ಬಿಜೆಪಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಿಮಿಕ್ ಮಾಡಲು ಶುರು ಮಾಡಿದ್ದಾರೆ. ನಾವು ಜನರಿಗೆ ಶಕ್ತಿ ತುಂಬಲು 2 ಸಾವಿರ ನೀಡಿದ್ದೇವೆ. ನೂರಕ್ಕೆ ನೂರು ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವುದಿಲ್ಲ ಎಂದರು. ಇನ್ನು ಯಾರೂ ಬೇಕಾದರೂ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರಬಹುದು. ನಾವೇನು ಅವರಿಗೆ ಬೇಡ ಅಂತಾ ಹೇಳುವುದಿಲ್ಲ. ಬರೋರು ನಮ್ಮ ಪಕ್ಷಕ್ಕೆ ಬರಬಹುದು ಎಂದು ತಿಳಿಸಿದರು.












Click it and Unblock the Notifications