ಭದ್ರಾ ಡ್ಯಾಂನಿಂದ ವಿವಿ ಸಾಗರಕ್ಕೆ ನೀರು ಹರಿಸಲು ಆದೇಶ
ಚಿತ್ರದುರ್ಗ, ಜುಲೈ 07; ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಮೂಲಕ ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾದ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಸರ್ಕಾರ ಆದೇಶ ನೀಡಿದೆ.
ಜುಲೈ 6ರಿಂದ ಅಕ್ಟೋಬರ್ 15ರ ವರೆಗೆ ನಿರಂತರವಾಗಿ ನೀರು ಹರಿಸಲು ಜಲಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಜಯಚಂದ್ರರಾಜು ಆದೇಶ ಹೊರಡಿಸಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಪತ್ರ ರವಾನೆ ಮಾಡಿದ್ದು ವಿವಿ ಸಾಗರಕ್ಕೆ ನೀರು ಹರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರೈತರಲ್ಲಿ ಹರ್ಷ; ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವಂತೆ ಸರ್ಕಾರದ ಆದೇಶ ನೀಡಿರುವ ಹಿನ್ನಲೆಯಲ್ಲಿ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟು ರೈತರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಹಾಗೂ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭದ್ರಾ ಜಲಾಶಯದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಯಲಿದೆ. ಭದ್ರಾ ಮೇಲ್ದಂಡೆ ಕಾಲುವೆ ಮೂಲಕ ಅಜ್ಜಂಪುರ ಸಮೀಪದ ವೈ ಜಂಕ್ಷನ್‌ನಿಂದ ಹೆಬ್ಬೂರು ಮಾರ್ಗವಾಗಿ ಕುಕ್ಕೆ ಸಮುದ್ರದಿಂದ ವೇದಾವತಿ ನದಿ ತಲುಪಿ ಅಲ್ಲಿಂದ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ನಂತರ ಕಾರೆಹಳ್ಳಿ ಬ್ರೀಡ್ಜ್ ಕಂ ಬ್ಯಾರೆಜ್‌ನಿಂದ ನೀರು ವಿವಿ ಸಾಗರ ತಲುಪುತ್ತದೆ.
ಯೋಜನೆಯ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಈಗಾಗಲೇ ಒಮ್ಮೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗಿದೆ.
ನೈಋತ್ಯ ಮುಂಗಾರು ಆರಂಭಗೊಂಡು ಒಂದು ತಿಂಗಳು ಕಳೆದಿದೆ. ಆದರೆ ಮಳೆ ಕಡಿಮೆಯಾದ ಕಾರಣ ಭದ್ರಾ ಜಲಾಶಯಕ್ಕೆ ಸಹ ಒಳಹರಿವು ಕಡಿಮೆ ಇದೆ. 648.38 ಮೀಟರ್ ಜಲಾಶಯದಲ್ಲಿ 644.38 ಅಡಿ ನೀರಿನ ಸಂಗ್ರಹವಿದೆ. ಮಂಗಳವಾರದ ವರದಿಯಂತೆ ಒಳಹರಿವು 914 ಕ್ಯುಸೆಕ್, ಹೊರಹರಿವು 80 ಕ್ಯುಸೆಕ್ ಆಗಿದೆ.












Click it and Unblock the Notifications