ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ: ಹಿರಿಯೂರಿನಲ್ಲಿ ಸುಪ್ರಸಿದ್ಧ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ
ಚಿತ್ರದುರ್ಗ, ಸೆಪ್ಟೆಂಬರ್ 18: ಇಂದು ನಾಡಿನಾದ್ಯಂತ ಸಡಗರ ಸಂಭ್ರಮದ ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಆಚರಣೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದರಂತೆ ಕೋಟೆ ನಾಡು ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಪಂಚಾಕ್ಷರ ಸಭಾಭವನದ ಪಕ್ಕದಲ್ಲಿ ಸುಮಾರು 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ಮೈಸೂರು ಅರಮನೆಯಂತೆ ಹೋಲುವ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಈ ಪೆಂಡಾಲ್ ರಾಜ ದರ್ಬಾರ್ ನಲ್ಲಿ ಶ್ರೀಗಣಪ ರಾರಾಜಿಸುತ್ತಿದ್ದಾನೆ. ವಿಶ್ವಹಿಂದೂ ಪರಿಷತ್, ಭಜರಂಗದಳ ವತಿಯಿಂದ ಈ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಇನ್ನು ಈ ವಿಶೇಷ ಪೂಜೆಯಲ್ಲಿ ನಗರದ ಅನೇಕ ಭಕ್ತರು ಸರತಿಯಲ್ಲಿ ಬಂದು ಗಣಪನ ದರ್ಶನ ಪಡೆದು ತನ್ನ ಇಷ್ಟಾರ್ಥಗಳನ್ನು ಬೇಡಿಕೊಂಡರು. 21 ದಿನಗಳ ಕಾಲ ಪೂಜೆ ನಡೆಯಲಿದ್ದು ಈ ಪೂಜೆಯಲ್ಲಿ ವಿಶೇಷ ಗೋಷ್ಠಿಗಳು, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು ಈ ಪೂಜಾ ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಗುರಿಪೀಠದ ಮಾದಾರ ಚೆನ್ನಯ್ಯ ಸ್ವಾಮಿಜಿ, ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ, ಎಂಎಲ್ಸಿ ಕೆ.ಎಸ್ ನವೀನ್, ಹಿಂದೂ ಮಹಾ ಗಣಪತಿ ಸಂಘಟನೆ ಅಧ್ಯಕ್ಷ ಎಂ.ಸುರೇಶ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಹಿರಿಯೂರಿನಲ್ಲೂ ಗಣಪ ಪ್ರತಿಷ್ಠಾಪನೆ
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹಿರಿಯೂರು ನಗರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಉಳಿದಂತೆ ನಗರದ ನೆಹರೂ ಮೈದಾನದಲ್ಲಿ ಶಕ್ತಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಹೊಳಲ್ಕೆರೆ ನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಅರ್ಪಿಸಲಾಯಿತು. ಉಳಿದಂತೆ ಹೊಸದುರ್ಗ, ಚಳ್ಳಕೆರೆ ಹಾಗೂ ಹೊಳಲ್ಕೆರೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಆಚರಣೆ ಮಾಡಲಾಗಿದೆ.
ಇನ್ನು ಗ್ರಾಮೀಣ ಭಾಗದಿಂದ ಯುವಕರು ಟ್ರಾಕ್ಟರ್, ಆಟೋ, ಬೈಕ್ ಸೇರಿದಂತೆ ವಿವಿಧ ವಾಹನಗಳಲ್ಲಿ ಗಣಪನ ಮೂರ್ತಿಗಳನ್ನು ಕೊಂಡೊಯ್ಯುದಿದ್ದು ಕಂಡು ಬಂದಿತ್ತು.












Click it and Unblock the Notifications