ಮೊಳಕಾಲ್ಮೂರು ಕ್ಷೇತ್ರದಿಂದ ಅಸೆಂಬ್ಲಿಗೆ ಸ್ಪರ್ಧೆ: ಶಶಿಕುಮಾರ್
ಬೆಂಗಳೂರು, ಮಾರ್ಚ್ 02: ನಟ ಕಮ್ ರಾಜಕಾರಣಿ, ಮಾಜಿ ಸಂಸದ ಶಶಿಕುಮಾರ್ ಅವರು ರಾಜ್ಯ ವಿಧಾನಸಭಾ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಶುಕ್ರವಾರ ಘೋಷಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್, ಈ ಹಿಂದೆ ಚಿತ್ರದುರ್ಗದ ಸಂಸದನಾಗಿ ಸಾಕಷ್ಟು ಕೆಲಸ ಮಾಡಿದ ಅನುಭವವಿದೆ. ಕ್ಷೇತ್ರದ ಜನರ ನಾಡಿಮಿಡಿತ ಅರಿತಿದ್ದೇನೆ. ಈ ಬಾರಿ ನಾನು ವಿಧಾನಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಾನೂ ಕೂಡ ಮೊಳಕಾಲ್ಮೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಕೆಪಿಸಿಸಿಯಿಂದ ಈಗಾಗಲೇ ಅರ್ಜಿ ಪಡೆದಿದ್ದೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಟಿಕೆಟ್ ಸಿಗುವ ಭರವಸೆಯಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಅಂತಿಮವಾಗಿ ಹಿರಿಯ ನಾಯಕರ ಆದೇಶವನ್ನು ಪಾಲಿಸಬೇಕಾಗುತ್ತದೆ.
ಆದರೆ, ಕಳೆದ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾಡಿ, ಜನರ ಬೇಡಿಕೆಗಳನ್ನು ಆಲಿಸಿದ್ದೇನೆ. ಜನತೆ ಬಯಸಿದಂತೆ ಸ್ಪರ್ಧೆಗೆ ನಿಲ್ಲುತ್ತಿದ್ದೇನೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಧುಮುಕಲು ಹಾಲಿ ಜಿಪಂ ಸದಸ್ಯ ಡಾ. ಯೋಗೀಶ್ ಬಾಬು ಪ್ರಯತ್ನಿಸಿದ್ದಾರೆ. ಆದರೆ, ಇದೇ ಕ್ಷೇತ್ರದ ಹಳೇ ಹುಲಿ ಎನ್.ವೈ. ಗೋಪಾಲ ಕೃಷ್ಣ ಅವರು ಈ ಬಾರಿ ತಮ್ಮ ಸ್ವಕ್ಷೇತ್ರಕ್ಕೆ ಮರಳಲು ಇಚ್ಛಿಸಿದರೆ, ಯೋಗೀಶ್ ಬಾಬು ಅವರಿಗೆ ಕೊಂಚ ಹಿನ್ನಡೆಯಾಗಲಿದೆ.
ಹಾಲಿ ಶಾಸಕ ತಿಪ್ಪೇಸ್ವಾಮಿ. ಇವರು ಬಿಎಸ್ ಆರ್ (ಶ್ರೀರಾಮುಲು ಪಕ್ಷ) ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ, ಬಿಎಸ್ ಆರ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದ್ದರಿಂದಾಗಿ, ಅವರೀಗ ಬಿಜೆಪಿ ಬೆಂಬಲಿತ ಶಾಸಕ.












Click it and Unblock the Notifications