ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ಮೂರಲ್ಲ 5 ಅಸ್ಥಿಪಂಜರಗಳು ಪತ್ತೆ, ಅಷ್ಟಕ್ಕೂ ನಡೆದಿದ್ದೇನು?
ಚಿತ್ರದುರ್ಗ, ಡಿಸೆಂಬರ್ 29: ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಹಳೆ ಬೆಂಗಳೂರು ಮಾರ್ಗದ ಜೈಲ್ ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಜಗನ್ನಾಥ ರೆಡ್ಡಿ ಸಮೀಲ್ ಇಂಜಿನಿಯರ್ ದೊಡ್ಡ ಸಿದ್ದವ್ವನಹಳ್ಳಿ ಎಂಬ ನಾಮಫಲಕ ಹೊಂದಿರುವ ಮನೆಯಲ್ಲಿ ಮೊದಲು ಮೂರು ಅಸ್ಥಿಪಂಜರಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿತ್ತು. ಆದರೆ ಪೊಲೀಸ್ ಪರಿಶೀಲನೆ ಬಳಿಕ ಐದು ಅಸ್ಥಿಪಂಜರಗಳು ಪತ್ತೆಯಾಗಿದೆ ಎನ್ನಲಾಗಿದೆ.

ಪಾಳು ಬಿದ್ದ ಮನೆಯೊಂದರಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿರುವ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್‌ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್, ಪಿಎಸ್ಐ ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಿತ್ರದುರ್ಗ ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದ ಜೈಲ್ ರಸ್ತೆಯ ಮನೆಯಲ್ಲಿ ನಿಗೂಢ ಅಸ್ಥಿಪಂಜರ ಪತ್ತೆಯಾದ ಬಗ್ಗೆ ಜಗನ್ನಾಥ ರೆಡ್ಡಿ ಸಂಬಂಧಿ ಪವನ್ ಕುಮಾರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಗನ್ನಾಥ ರೆಡ್ಡಿ ಸಮೀಲ್ ಇಂಜಿನಿಯರ್ ದೊಡ್ಡ ಸಿದ್ದವ್ವನಹಳ್ಳಿ ಮತ್ತು ಅವರ ಕುಟುಂಬ ಆ ಮನೆಯಲ್ಲಿ ವಾಸವಾಗಿದ್ದರು. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ವಾಸವಾಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ.
ಕೆಲ ವರ್ಷಗಳಿಂದ ಜಗನ್ನಾಥ ರೆಡ್ಡಿ ಮತ್ತು ಕುಟುಂಬದವರು ಯಾರಿಗೂ ಕಂಡಿಲ್ಲ. ಜಗನ್ನಾಥ ರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವುದು ಅವರದೇ ಅಸ್ಥಿಪಂಜರ ಆಗಿರಬಹುದು. ಮನೆಯಲ್ಲಿ 5 ಅಸ್ಥಿಪಂಜರಗಳು ಪತ್ತೆ ಆಗಿವೆ. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರು ದಾಖಲು ಮಾಡಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಅಸ್ಥಿಪಂಜರಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಘಟನೆಯ ಬಗ್ಗೆ ಸ್ಥಳೀಯರು ಹೇಳುವುದೇನು..?
2019ರಲ್ಲಿ ದೊಡ್ಡ ಸಿದ್ದವ್ವನಹಳ್ಳಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಸಂಪೂರ್ಣ ಕುಟುಂಬ ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲವಂತೆ. ಮನೆಗೆ ಯಾರೇ ಬಂದರೂ ಬಾಗಿಲು ತೆಗೆಯದೇ ಕಿಟಕಿಯಲ್ಲಿ ಮಾತನಾಡಿಸಿ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ ಈ ಮನೆಯ ನಿವಾಸಿಗಳು ನವೆಂಬರ್ 2022ರಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡು ಬಂದಿದೆ. ನವೆಂಬರ್ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತಲೂ ಸ್ವಲ್ಪ ದುರ್ವಾಸನೆ ಬಂದಿದ್ದು, ನಾವು ಯಾವುದೋ ಪ್ರಾಣಿ ಸತ್ತಿರುವ ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ತಿಳಿಸಿದ್ದಾರೆ.












Click it and Unblock the Notifications