ಹೋರಿ ಕದ್ದವನಿಗೆ ಬೆತ್ತಲೆ ಮೆರವಣಿಗೆ ಪ್ರಕರಣ; 9 ಮಂದಿ ಮೇಲೆ FIR
ಚಿತ್ರದುರ್ಗ, ಆಗಸ್ಟ್ 22: ಹೋರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ವ್ಯಕ್ತಿಗೆ ಸರಸ್ವತಿಹಟ್ಟಿ ಮತ್ತು ಕೆರೆಮುಂದಲಹಟ್ಟಿ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿ, ಬೆತ್ತಲೆಗೊಳಿಸಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದ ಘಟನೆ ನಿನ್ನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸರಸ್ವತಿ ಹಟ್ಟಿಯಲ್ಲಿ ನಡೆದಿತ್ತು.
Recommended Video
ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಈಶ್ವರ್ ದೂರಿನ ಮೇರೆಗೆ ಒಂಬತ್ತು ಮಂದಿ ಮೇಲೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಈಶ್ವರ್, ಇದೇ ತಿಂಗಳ 20ರಂದು ಬಾಲಣ್ಣ ಎನ್ನುವವರ ಮನೆಯ ಮುಂದೆ ಕಟ್ಟಿ ಹಾಕಿದ್ದ ಹೋರಿಗಳನ್ನು ಕಳ್ಳತನ ಮಾಡಿದ್ದ. ಮಾರನೇ ದಿನ ಅವುಗಳನ್ನು ಮಾರಾಟ ಮಾಡಲು ಬೆಳಿಗ್ಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಹೋರಿಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಕೆರೆಮುಂದಲಹಟ್ಟಿಯ ಇಬ್ಬರು ಹೋರಿಗಳನ್ನು ಕಸಿದುಕೊಂಡು, ಈಶ್ವರ್ ನನ್ನು ಮೋಟಾರ್ ಬೈಕ್ ನಲ್ಲಿ ಗ್ರಾಮಕ್ಕೆ ಕರೆತಂದಿದ್ದರು. ಆನಂತರ ಊರಿನಲ್ಲಿ ಕತ್ತೆ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಮಾಡಿಸಿದ್ದರು.

ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆತ್ತಲೆಯಾಗಿಸಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿ, ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಪ್ರಕರಣ ಕೈಗೊಂಡ ಪೊಲೀಸರು, ಒಂಬತ್ತು ಮಂದಿ ಮೇಲೆ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications