ತುರ್ತು ಕೆಲಸವಿದ್ದರೆ ಅಂತರ್ ಜಿಲ್ಲೆ, ರಾಜ್ಯ ಇ-ಪಾಸ್: ಚಿತ್ರದುರ್ಗ ಡಿಸಿ
ಚಿತ್ರದುರ್ಗ, ಏಪ್ರಿಲ್ 23: ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ತುರ್ತು ಕಾರ್ಯ ನಿಮಿತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗ ಬಯಸುವವರಿಗೆ ಮಾತ್ರ ಇ-ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಆನ್ ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಮ್ ಕ್ವಾರಂಟೈನ್ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.
ವೈದ್ಯಕೀಯ ಚಿಕಿತ್ಸೆ, ಸ್ವಂತ ಮದುವೆ ಹಾಗೂ ಶವಸಂಸ್ಕಾರ ಸೇರಿದಂತೆ ಮೂರು ಪ್ರಮುಖ ಕಾರಣಗಳಿಗಾಗಿ ಮಾತ್ರ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ತೆರಳುವವರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಇ-ಪಾಸ್ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಆದರೆ ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ರೋಗ ಲಕ್ಷಣ ಇರಲಿ, ಇಲ್ಲದಿರಲಿ ಹೋಂ ಕ್ವಾರಂಟೈನ್ ಕಡ್ಡಾಯವಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಇ-ಪಾಸ್ ವಿತರಿಸಲು ಏಪ್ರಿಲ್ 23 ರಿಂದ ಆನ್ ಲೈನ್ ನಲ್ಲಿ ಇ-ಪಾಸ್ ಪೋರ್ಟಲ್ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಾವು ಇರುವ ಸ್ಥಳದಲ್ಲಿಯೇ ಈ ಪೋರ್ಟಲ್ ಮುಖಾಂತರ ಅರ್ಜಿ ಭರ್ತಿಮಾಡಿ, ಒಂದು ಗುರುತಿನ ಚೀಟಿ, ಹೊರ ಹೋಗಲು ಕಾರಣ, ದಾಖಲೆಯ ಮಾಹಿತಿ ನೀಡಿ ಕೇವಲ ಒಂದೇ ದಿನದಲ್ಲಿ ಇ-ಪಾಸ್ ಪಡೆಯಬಹುದು.
ಸಾರ್ವಜನಿಕರ ಅನಾವಶ್ಯಕ ಓಡಾಟ ತಪ್ಪಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುವವರು, ಸ್ವಂತ ಮದುವೆ ಹಾಗೂ ಶವ ಸಂಸ್ಕಾರಕ್ಕೆ ಕುಟುಂಬದವರಿಗೆ ಮಾತ್ರ ಗರಿಷ್ಠ 04 ಜನರಿಗೆ ಮಾತ್ರ ಪಾಸ್ ನೀಡಲು ಅವಕಾಶವಿದೆ. ಇ-ಪಾಸ್ ಪಡೆಯಲು http://covid19passchitradurga.com ಲಿಂಕ್ ಬಳಸಿ ಆನ್‍ಲೈನ್ ಮೂಲಕ ಸಲ್ಲಿಸಬಹುದು ಎಂದರು.












Click it and Unblock the Notifications