NEET ಪ್ರತಿಭಟನೆ: ವಿದ್ಯಾರ್ಥಿಗಳನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ರಾಹುಲ್ ಗಾಂಧಿ - ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾಚಿಕೆಯಿಲ್ಲದೆ ವಿದ್ಯಾರ್ಥಿಗಳನ್ನ 'ರಾಜಕೀಯ ಅಸ್ತ್ರ'ವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ನಡೆದ 'ಚಲೋ ಸಂಸದ್' ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ ಬೆನ್ನಲ್ಲೇ, ಆಡಳಿತರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ.

Dharmendra Pradhan

ಪ್ರಧಾನಿ ನಿವಾಸದ ಬಳಿ ಹೈಡ್ರಾಮಾ

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡಿದ್ದು, ಹಾಗೆಯೇ ಭದ್ರತಾ ನಿಯಮಗಳನ್ನ ಸಹ ಉಲ್ಲಂಘಿಸಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ಮುಂಗಾರು ಅಧಿವೇಶನದ ಕಲಾಪಗಳಿಗೆ ಅಡ್ಡಿಪಡಿಸುವ ಏಕೈಕ ಉದ್ದೇಶದಿಂದಲೇ ಕಾಂಗ್ರೆಸ್ ಈ ರೀತಿಯ ಗಲಭೆಗಳನ್ನ ಸೃಷ್ಟಿಸುತ್ತಿದೆ.

"ವಿದ್ಯಾರ್ಥಿಗಳ ಭವಿಷ್ಯವನ್ನ ಕಾಪಾಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವೇ ಆಗಿರಲಿಲ್ಲ. ಬದಲಾಗಿ, ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಪತ್ರಿಕೆಗಳ ಮುಖಪುಟದಲ್ಲಿ ತಾವು ಸುದ್ದಿಯಾಗಲು ಅವರು ಈ ತಂತ್ರವನ್ನ ಬಳಸುತ್ತಿದ್ದಾರೆ" ಎಂದು ಪ್ರಧಾನ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳನ್ನು ರಾಜಕೀಯ ಅಸ್ತ್ರವಾಗಿಸಿದ ರಾಹುಲ್ ಗಾಂಧಿ

ಪ್ರಜಾಸತ್ತಾತ್ಮಕವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವು ಬೀದಿಯಲ್ಲಿನ ರಾಜಕೀಯ ನಾಟಕವನ್ನೇ ಹೆಚ್ಚು ನೆಚ್ಚಿಕೊಂಡಿದೆ ಎಂದು ಪ್ರಧಾನ್ ಟೀಕಿಸಿದ್ದಾರೆ. ಪ್ರತಿಯೊಂದು ಚರ್ಚೆಗೂ ಸರ್ಕಾರ ಮುಕ್ತ ಅವಕಾಶ ತೆರೆದಿಟ್ಟಿದ್ದರೂ, ರಾಹುಲ್ ಗಾಂಧಿ ಅವರು ಬೇಕೆಂತಲೇ ಸಂಘರ್ಷವನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ.

"ಭಾರತದ ವಿದ್ಯಾರ್ಥಿಗಳನ್ನು ಕೇವಲ ರಾಜಕೀಯ ಪ್ರಚಾರದ ದಾಳಗಳಾಗಿ ಬಳಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ವಿದ್ಯಾರ್ಥಿಗಳು ಪೊಳ್ಳು ಭಾಷಣಗಳಿಗಿಂತ ಶಾಶ್ವತ ಪರಿಹಾರವನ್ನು, ಗೊಂದಲದ ವಾತಾವರಣಕ್ಕಿಂತ ಭವಿಷ್ಯದ ಖಚಿತತೆಯನ್ನ ಮತ್ತು ಬೀದಿ ಗಲಾಟೆಗಿಂತ ಜವಾಬ್ದಾರಿಯುತ ಆಡಳಿತವನ್ನ ಬಯಸುತ್ತಾರೆ" ಎಂದು ಸಚಿವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೀಟ್ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧ

ನೀಟ್ ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂಪೂರ್ಣ ಮತ್ತು ಪಾರದರ್ಶಕ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಶೇ. 100ರಷ್ಟು ಸಿದ್ಧವಿದೆ ಎಂದು ಧರ್ಮೇಂದ್ರ ಪ್ರಧಾನ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಯುವಜನತೆಯ ಪ್ರತಿಯೊಂದು ಕಳವಳವನ್ನ ಆಲಿಸಲು ಮತ್ತು ಅವುಗಳನ್ನ ಪರಿಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಪಡುತ್ತದೆ.

"ನಮ್ಮ ವಿದ್ಯಾರ್ಥಿಗಳಿಗೆ ನಾವು ಕೇವಲ ಆಕ್ರೋಶವನ್ನಲ್ಲ, ಬದಲಾಗಿ ಅವರ ಪ್ರಶ್ನೆಗಳಿಗೆ ಉತ್ತರಗಳು, ಪರೀಕ್ಷಾ ವ್ಯವಸ್ಥೆಯಲ್ಲಿನ ಕ್ರಾಂತಿಕಾರಿ ಸುಧಾರಣೆಗಳು ಮತ್ತು ನಿಖರವಾದ ಹೊಣೆಗಾರಿಕೆಯನ್ನ ಒದಗಿಸಬೇಕಿದೆ. ಅದನ್ನು ತಲುಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಏನಾಯಿತು?

ನೀಟ್ ಪರೀಕ್ಷಾ ಅಕ್ರಮಗಳ ನೈತಿಕ ಹೊಣೆಹೊತ್ತು ಕೇಂದ್ರ ಸರ್ಕಾರ ಮತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಗರು, ಮೊದಲ ಬಾರಿಗೆ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು ಮತ್ತು ಯುವಜನರು ಸಂಸತ್ತಿನತ್ತ ಬೃಹತ್ ಮೆರವಣಿಗೆ ನಡೆಸಿದರು. ಮೂರನೇ ಅವಧಿಯ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ನಡೆದ ಅತಿದೊಡ್ಡ ಪ್ರತಿಭಟನೆ ಇದಾಗಿದ್ದು, ದೆಹಲಿಯ ಮಳೆಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಸುಮಾರು 2,000 ಸಿಬ್ಬಂದಿ ಹಾಗೂ 20 ಅರೆಸೇನಾ ಪಡೆ ತುಕಡಿಗಳನ್ನು ಭದ್ರತೆಗೆ ನಿಯೋಜಿಸಿದ್ದರು.

ಆದರೆ, ಪ್ರತಿಭಟನೆ ತೀವ್ರಗೊಂಡು ಹಿಂಸಾರೂಪಕ್ಕೆ ತಿರುಗಿ ಕಲ್ಲುತೂರಾಟ ನಡೆದಾಗ ಪೊಲೀಸರು ಅಶ್ರುವಾಯು ಸಿಡಿಸಿ ಭಾರಿ ಲಾಠಿಚಾರ್ಜ್ ನಡೆಸಿದರು. ಈ ಘರ್ಷಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಬರೋಬ್ಬರಿ 118 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆ ತಿಳಿಸಿದೆ.

ಅಲ್ಲದೆ, ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರೂ ಗಾಯಗೊಂಡಿದ್ದು, ಕನಿಷ್ಠ 100ಕ್ಕೂ ಹೆಚ್ಚು ಗಾಯಾಳುಗಳನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರತಿಭಟನೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಯುವಜನತೆಯ ಭವಿಷ್ಯವನ್ನು ನಾಶ ಮಾಡುತ್ತಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಹಕ್ಕು ಕಸಿದುಕೊಂಡಿದೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+